ಚಿಕ್ಕಮಗಳೂರು : ಶೋಷಿತ ವರ್ಗದ ಮಹಿಳೆಯರು ದೇಶದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದು ಬಿಎಸ್‍ಪಿ ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಸಲಹೆ ನೀಡಿದರು.
ನಗರದ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಕೇವಲ ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಪುಲೆ ಅವರು ತಮ್ಮ ಪತಿಯ ಪ್ರೋತ್ಸಾಹದಿಂದ ತಾವು ಶಿಕ್ಷಣವಂತರಾಗುವುದರ ಜೊತೆಗೆ ತನ್ನಂತೇ ಎಲ್ಲಾ ಮಹಿಳೆಯರೂ ವಿದ್ಯಾವಂತರಾಗಲೆಂದು ಸಮಾಜ ನೀಡಿದ ನೋವು, ಅಪಮಾನ, ಹಿಂಸೆಗಳನ್ನು ಸಹಿಸಿ ಮಹಿಳೆಯರಿಗಾಗಿ ದೇಶದಲ್ಲೇ ಮೊದಲ ಬಾರಿಗೆ ಶಾಲೆ ತೆರೆದರು ಎಂದರು.
ಶಾಲೆ ತೆರೆಯುವುದರ ಜೊತೆಗೆ ಎಲ್ಲಾ ಕಷ್ಟಗಳನ್ನೂ ಎದುರಿಸಿ ತಾವೇ ಸ್ವತಃ ಪಾಠ ಮಾಡುವುದರ ಜೊತೆಗೆ ಸತಿಸಹಗಮನದಂತಹ ಅನೇಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿದರು ಎಂದು ಹೇಳಿದರು.
ಸಾವಿತ್ರಿಬಾಯಿ ಪುಲೆ ಅವರು ಶಿಕ್ಷಣ ಕ್ರಾಂತಿ ಮಾಡದಿದ್ದಲ್ಲಿ ಇಂದಿಗೂ ದೇಶದಲ್ಲಿ ಮಹಿಳೆಯರು ಅಡುಗೆ ಮನೆಗಷ್ಟೇ ಸೀಮಿತರಾಗಬೇಕಿತ್ತು ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ದೇಶದಲ್ಲಿ ಇಂದು ಮಹಿಳೆಯರು ಶಿಕ್ಷಣವಂತರಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದಿರುವುದಕ್ಕೆ ಮೂಲ ಕಾರಣ ಸಾವಿತ್ರಿಬಾಯಿ ಪುಲೆ ಅವರ ಶಿಕ್ಷಣ ಕ್ರಾಂತಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಶೋಷಿತ ಸಮುದಾಯದ ಮಹಿಳೆಯರು ತಮಗೆ ಶಿಕ್ಷಣವಂತರಾಗಲು ಅವಕಾಶ ಕಲ್ಪಿಸಿದ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರವನ್ನು ತಮ್ಮ ಮನೆಗಳಲ್ಲಿ ಹಾಕಬೇಕು ಎಂದು ಕಿವಿಮಾತು ಹೇಳಿದರು.
ಜನ್ಮ ದಿನದ ಪ್ರಯುಕ್ತ ಸಮಾರಂಭದಲ್ಲಿ ಸಿಹಿ ವಿತರಿಸಲಾಯಿತು. ಕಚೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಬಿ.ಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಪಕ್ಷದ ಮುಖಂಡರಾದ ಎ.ಪಿ.ಸುರೇಶ್, ಕೆ.ಎಸ್.ಮಂಜುಳ, ನವೀನ್, ವಸಂತ, ವಿಜಯಕುಮಾರ್, ರವಿಕುಮಾರ್, ಶೋಭಾ ಉಪಸ್ಥಿತರಿದ್ದರು.










