ಮೈಸೂರು: ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದರಾದ ಈ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಎಐಸಿಸಿ ಯಿಂದ ಟಿಕೆಟ್ ಘೋಷಣೆಯ ಮೊದಲೇ ಸಿಎಂ ಸಿದ್ದರಾಮಯ್ಯ ಅವರು ಸಂಡೂರು ಟಿಕೆಟ್ ಘೋಷಣೆ ಮಾಡಿದ್ದಾರೆ. ಇಂದು ಮೈಸೂರಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಡೂರು ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆಯ ಕುರಿತಾದ ಪ್ರಶ್ನೆಗೆ ಈ ರೀತಿಯಲ್ಲಿ ಉತ್ತರ ನೀಡಿದ್ದಾರೆ ಸಂಡೂರಿನಲ್ಲಿ ಈ ತುಕರಾಂ ಪತ್ನಿ ಅಥವಾ ಪುತ್ರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಅವರೇ ಟಿಕೆಟ್ ನೀಡುವ ಕುರಿತಾಗಿ ಹೇಳಿಕೆ ನೀಡಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಆಗಿದೆ. ಡಿ.ಕೆ.ಸುರೇಶ್ ಅವರೂ ಕೂಡ ಪ್ರಭಲ ಅಭ್ಯರ್ಥಿ ಆಗಿದ್ದಾರೆ. ಒಂದೆರಡು ದಿನಗಳಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾವ್ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಸ್ಪಷ್ಟವಾಗಲಿದೆ ಎಂದರು. ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಅವರು ಕಾಂಗ್ರೆಸ್ಸಿಗೆ ಸೇರಲು ಉತ್ಸುಕರಾಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಕಾಂಗ್ರೆಸ್ಸಿನ ಸಿದ್ಧಾಂತ ಮತ್ತು ಸಂವಿಧಾನದ ಮೌಲ್ಯಗಳನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ಎಂದರು. ಸಿಪಿ ಯೋಗೇಶ್ವರ್ ಅವರು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಅವರು ಕಾಂಗ್ರೆಸ್ಗೆ ಸೇರ್ಪಡೆ ಆಗುತ್ತಾರೆ ಎಂಬ ವದಂತಿಗಳು ಹಬ್ಬಿದೆ. ಆದರೆ ಇದನ್ನು ಸಿಪಿ ಯೋಗೇಶ್ವರ್ ಇನ್ನೂ ಅಧಿಕೃತಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮಾತು ಮಹತ್ವ ಪಡೆದುಕೊಂಡಿದೆ.










