ಸರಳವಾಗಿ ನೆರವೇರಿದ ಮಂಗಳೂರು ದಸರಾ ಉತ್ಸವ…

71
firstsuddi

ಮಂಗಳೂರು : ಮಂಗಳೂರು ದಸರಾ ಹಿನ್ನೆಲೆಯಲ್ಲಿ ಕುದ್ರೋಳಿಯಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆವರಣದಲ್ಲಿ ನವರಾತ್ರಿಯಂದು ನಡೆಯುವ ಅದ್ಧೂರಿ ದಸರಾ ಈ ವರ್ಷ ಸರಳ ದಸರಾವಾಗಿತ್ತು. ನಿನ್ನೆ ರಾತ್ರಿ ದಸರಾ ಕಾರ್ಯಕ್ರಮಗಳು ಸಂಪೂರ್ಣವಾಗಿ ಮುಗಿದು ಈ ಬಾರಿಯ ನವರಾತ್ರಿ ಸಂಪನ್ನಗೊಂಡಿದೆ. ಕೋವಿಡ್ ಗೈಡ್‍ಲೈನ್ಸ್ ಪ್ರಕಾರ ಅತ್ಯಂತ ಸರಳವಾಗಿ ಈ ಬಾರಿ ದಸರಾ ಉತ್ಸವ ನೆರವೇರಿತು.

ಅ.7ರಂದು ನವರಾತ್ರಿ ಆರಂಭ ದಿನದಿಂದ ಒಂಬತ್ತು ದಿನಗಳಲ್ಲಿ ಶ್ರೀ ಶಾರದಾ ಮಾತಾ, ನವದುರ್ಗೆಯರ ಸಹಿತ ಶ್ರೀ ಮಹಾಗಣಪತಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ಮುಂದಿ 9 ದಿನಗಳ ಕಾಲ ಆರಾಧನೆ ಮಾಡಲಾಗಿತ್ತು. ವಿಜಯದಶಮಿಯ ದಿನ ಎಲ್ಲಾ ಮೂರ್ತಿಗಳನ್ನು ಜಲಸ್ತಂಭನ ಮೂಲಕ ಮಂಗಳೂರು ದಸರಾ ಮುಕ್ತಾಯಗೊಂಡಿತು. ನಿನ್ನೆ ರಾತ್ರಿ 9.30ರ ವೇಳೆಗೆ ವಿಸರ್ಜನಾ ಪೂಜೆ ನಡೆದು ಎಲ್ಲಾ ಮೂರ್ತಿಗಳನ್ನು ದೇವಾಲಯದ ಪುಷ್ಕರಣಿಯಲ್ಲಿ ಜಲಸ್ತಂಭನ ಮಾಡಲಾಯಿತು.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮಂಗಳೂರಿನ ರಾಜಬೀದಿಯಲ್ಲಿ ಶ್ರೀಶಾರದಾ ಮಾತೆ, ನವದುರ್ಗೆಯರ ಮೆರವಣಿಗೆಗೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಅದೇ ರೀತಿ ಯಾವುದೇ ಟ್ಯಾಬ್ಲೊ, ಸ್ತಬ್ಧಚಿತ್ರಗಳಿಗೂ ಅವಕಾಶವಿರಲಿಲ್ಲ. ಆದರೆ ಹುಲಿವೇಷ ಕುಣಿತಕ್ಕೆ ಅವಕಾಶ ನೀಡಲಾಗಿತ್ತು. ಸಾವಿರಾರು ಭಕ್ತಾದಿಗಳು ನಾಡಹುಲಿಗಳ ನರ್ತನವನ್ನು ಕಣ್ತುಂಬಿಕೊಂಡರು. ಒಟ್ಟಾರೆ ರಾಜ್ಯದಲ್ಲೇ ಮೈಸೂರು ಬಳಿಕ ಎರಡನೇ ಅತೀ ದೊಡ್ಡ ದಸರಾ ಎಂದು ಕರೆಸಿಕೊಳ್ಳುವ ಮಂಗಳೂರು ದಸರಾ ಉತ್ಸವಕ್ಕೆ ತೆರೆ ಬಿದ್ದಿದೆ.