ಮಂಡ್ಯ : ಪ್ರಸಿದ್ಧ ಯಾತ್ರಾಸ್ಥಳ ಮೇಲುಕೋಟೆಯಲ್ಲಿ ಚಾಲ್ತಿಯಲ್ಲಿರುವ ಸಲಾಂ ಆರತಿ ಹೆಸರನ್ನು ತೆಗೆಯುವಂತೆ ಮೇಲುಕೋಟೆ ಸ್ಥಾನಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಂಧ್ಯಾರತಿ ಹೆಸರು ಉಳಿಸಿಕೊಂಡು, ಸಲಾಂ ಪದವನ್ನು ಕೈ ಬಿಡಬೇಕು ಎಂದು ಮೇಲುಕೋಟೆ ಸ್ಥಾನಿಕರಾದ ಶ್ರೀನಿವಾಸ್ ಅವರು ಕೋರಿದ್ದಾರೆ. ತ್ರಿಕಾಲದಲ್ಲಿಯೂ ದೇವರಿಗೆ ಆರತಿ ಮಾಡುವ ಪದ್ಧತಿ ಎಲ್ಲ ದೇವಾಲಯಗಳಲ್ಲಿಯೂ ಇದೆ. ಸಂಜೆ ವೇಳೆ ಮೇಲುಕೋಟೆ ದೇವಾಲಯದಲ್ಲಿ ನಡೆಯುವ ಸಂಧ್ಯಾರತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮುಸ್ಲಿಂ ದಾಳಿಕೋರರಿಂದ ದಾಳಿಯಾದ ಸಂದರ್ಭದಲ್ಲಿ ಅಥವಾ ಟಿಪ್ಪುವಿನ ಕಾಲದಲ್ಲಿ ಸಂಧ್ಯಾರತಿಗೆ ಸಲಾಂ ಪದ ಸೇರಿದೆ ಎಂದು ಹೇಳಿದರು.
ಮೂಲ ಮೂರ್ತಿಗೆ ಆರತಿಯಾಗುವ ಸಂಧರ್ಭದಲ್ಲಿ ದೇವಾಲಯದ ಹೊರಗಡೆ ದೀವಟಿಗೆ ಸಲಾಂ ಮಾಡಲಾಗುತ್ತೆ. ಬಳಿಕ ದೇವಾಲಯ ಗರ್ಭಗುಡಿಯ ಬಳಿಯು ದೀವಟಿಗೆ ಸಲಾಂ ಮಾಡಲಾಗುತ್ತೆ. ಚಲುವನಾರಾಯಣ ಸ್ವಾಮಿ ಎಲ್ಲಾ ಉತ್ಸವ ಮುಗಿಸಿ ಆಸ್ಥಾನಕ್ಕೆ ಬರುವ ವೇಳೆ ಈ ದೀವಟಿಗೆ ಸಲಾಂ ಮಾಡಲಾಗುತ್ತೆ. ಸಂಧ್ಯಾರತಿಗೆ ಯಾರ ಆಕ್ಷೇಪಣೆಯೂ ಇಲ್ಲ. ಆದ್ರೆ ಸಲಾಂ ಪದಕ್ಕೆ ಎಲ್ಲರ ಆಕ್ಷೇಪಣೆ ಇದೆ. ಸಲಾಂ ಪದ ರದ್ದು ಮಾಡಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಈ ವಿಚಾರವಾಗಿ ಸರ್ಕಾರ ಪರಿಶೀಲನೆ ಮಾಡಬೇಕು ಎಂದು ಕೋರಿದರು.










