ಹೈದರಾಬಾದ್ : ಸಾಲಬಾಧೆ ಹಿನ್ನಲೆ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಚಿರ್ಯಾಲ ಜಿಲ್ಲೆಯ ಮಲ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ.
ರೈತ ರಮೇಶ್(40) ಈತನ ಪತ್ನಿ ಹಾಗೂ ತಮ್ಮ ಇಬ್ಬರು ಮಕ್ಕಳಾದ ಸೌಮ್ಯಾ(19) ಮತ್ತು ಅಕ್ಷಯ್(17) ನೇಣಿಗೆ ಶರಣಾದ ದುರ್ದೈವಿಗಳು. ನಿನ್ನೆ ನಮಗೆ ಸಾಲ ಕೊಟ್ಟವರಿಗೆ ಸಾಲ ವಾಪಸ್ ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೆವು. ಆದರೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
ರೈತ ರಮೇಶ್ ಅವರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಲಕ್ಷಾಂತರ ರೂ.ಹಣವನ್ನು ಸಾಲ ಮಾಡಿದ್ದರು. ಆದರೆ ಬೆಳೆದ ಬೆಳೆ ಸಂಪೂರ್ಣ ಹಾನಿಯಾಗಿತ್ತು. ಅಲ್ಲದೇ ಮಗಳ ಮದುವೆಗೆಂದು ಸಾಲ ಮಾಡಿದ್ದಾರೆ. ಆದರೆ ರಮೇಶ್ ಅವರಿಗೆ ಸಾಲ ತೀರಿಸಲು ಸಾಧ್ಯವಾಗಿಲ್ಲ. ಇದರ ನಡುವೆಯೂ ಸಾಲಗಾರರ ಕಾಟ ಕೂಡ ಶುರುವಾಗಿತ್ತು. ನಿನ್ನೆ ಸಾಲ ವಾಪಸ್ ಕೊಡುವುದಾಗಿ ಮಾತುಕೊಟ್ಟಿದ್ದರು. ಆದರೆ ಹಣವನ್ನು ವಾಪಸ್ ಕೊಡುವ ಸ್ಥಿತಿಯಲ್ಲಿ ರಮೇಶ್ ಅವರ ಕುಟುಂಬ ಇರಲಿಲ್ಲ. ಹೀಗಾಗಿ ಸಾಲದ ಹೊರೆಯಿಂದ ಮನನೊಂದ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಸಂಬಂಧ ಮಂಚಿರ್ಯಾಲ ಜಿಲ್ಲಾ ಕಾಸಿಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










