ಸಿನಿಮಾ ರೂಪದಲ್ಲಿ ಬರಲಿದೆ ಸೌಜನ್ಯಾ ಕೇಸ್? ಸ್ಟೋರಿ ಆಫ್ ಸೌಜನ್ಯಾ ಟೈಟಲ್ ನೋಂದಣಿ…

55
firstsuddi

ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಇದೇ ಪ್ರಕರಣ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಜಿ.ಕೆ. ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಟೈಟಲ್ ಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, ‘ಸ್ಟೋರಿ ಆಫ್ ಸೌಜನ್ಯಾ’ ಶೀರ್ಷಿಕೆಯನ್ನು ಕೊಡುವಂತೆ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಅರ್ಜಿಯಲ್ಲಿ ಸಲ್ಲಿಕೆಯಾದಂತೆ ಇದೊಂದು ಸಾಮಾಜಿಕ ಕಥಾ ಹಂದರ ಹೊಂದಿರಲಿದೆ. ಈ ಚಿತ್ರ ಕನ್ನಡದಲ್ಲಿ ಮಾತ್ರ ಸಿದ್ಧವಾಗಲಿದೆ ಎಂದು ಹೇಳಲಾಗಿದೆ.

ಏನಿದು ಘಟನೆ?: 2018ರಲ್ಲಿ ಕಾಲೇಜಿನಿಂದ ಮನೆಗೆ ಬರುತ್ತಿದ್ದ ಸೌಜನ್ಯಾ ಅವರನ್ನು ಅಕ್ಟೋಬರ್ 9ರಂದು ಅಪಹರಿಸಲಾಯಿತು. ಅದೇ ದಿನ ರಾತ್ರಿಯೇ ಆಕೆ ಕಾಣೆಯಾಗಿದ್ದರ ಬಗ್ಗೆ ದೂರು ದಾಖಲಾಗುತ್ತದೆ. ಅಕ್ಟೋಬರ್ 10ರಂದು ಈ ಬಾಲಕಿ ಶವವಾಗಿ ಧರ್ಮಸ್ಥಳದ ಮಣ್ಣಸಂಖದಲ್ಲಿ ಪತ್ತೆಯಾಗುತ್ತಾಳೆ. ಅತ್ಯಾಚಾರದ ನಂತರ ಈಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರುತ್ತದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಸಂತೋಷ್ ರಾವ್ ಎನ್ನುವವರನ್ನು ಮಾನ್ಯ ನ್ಯಾಯಾಲಯ ನಿರ್ದೋಷಿ ಎಂದು ಇತ್ತೀಚೆಗೆ ಆದೇಶ ನೀಡಿದೆ. ಹಾಗಾಗಿ ಮತ್ತೆ ಸೌಜನ್ಯಾಳ ಸಾವು ಮುನ್ನೆಲೆಗೆ ಬಂದಿದೆ. ಈ ಪ್ರಕರಣವನ್ನು ಮರುತನಿಖೆ ನಡೆಸಬೇಕು ಎಂದು ಆಕೆಯ ಕುಟುಂಬಸ್ಥರೂ ಆಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಸೌಜನ್ಯಾಳ ನೈಜ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲು ಚಿತ್ರತಂಡ ಮುಂದಾಗಿದೆ ಎಂದು ಹೇಳಲಾಗುತ್ತಿದೆ.