ಬೆಂಗಳೂರು : ಚಲಿಸುತ್ತಿದ್ದ ರೈಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ನದಿಗೆ ಬಿದ್ದು ಯುವಕನೋರ್ವ ಸಾವಿಗೀಡಾಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಭಿಷೇಕ್ ಮೃತ ಯುವಕ. ಪಾಂಡವಪುರಕ್ಕೆ ತೆರಳುತ್ತಿದ್ದ ವೇಳೆ ರೈಲಿನ ಬಾಗಿಲಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಲೋಕಪಾವನಿ ನದಿಗೆ ಬಿದ್ದು, ಮೃತ ಪಟ್ಟಿದ್ದಾನೆ.
ಇದೇ ತಿಂಗಳ 6 ರಂದು ಸ್ನೇಹಿತರೊಂದಿಗೆ ರೈಲಿನಲ್ಲಿ ಊರಿಗೆ ಹೋಗುತ್ತಿದ್ದ ಅಭಿಷೇಕ್, ಮಾರ್ಗದುದ್ದಕ್ಕೂ ಸ್ನೇಹಿತರೊಂದಿಗೆ ಸೆಲ್ಫಿ ಫೋಟೋಗಳನ್ನು ತೆಗೆದಿದ್ದ. ಮಧ್ಯರಾತ್ರಿ ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಸ್ನೇಹಿತರೆಲ್ಲರೂ ಇಳಿದಿದ್ದರು. ಆದರೆ ಅಭಿಷೇಕ್ ಮಾತ್ರ ಕಾಣೆಯಾಗಿದ್ದ. ಎರಡು ದಿನವಾದರೂ ಅಭಿಷೇಕ್ ಮನೆಗೆ ಬಾರದ ಹಿನ್ನೆಲೆ ಆತಂಕಗೊಂಡ ಮನೆಯವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಶಿವಸ್ವಾಮಿ ನೇತೃತ್ವದ ತಂಡ ಪಾಂಡವಪುರಕ್ಕೆ ರೈಲಿನಲ್ಲಿ ಹೋಗಿರುವ ಬಗ್ಗೆ ಸ್ನೇಹಿತರಿಂದ ಮಾಹಿತಿ ಸಂಗ್ರಹಿಸಿ, ಮಂಡ್ಯ ಪೊಲೀಸರು ಹಾಗೂ ಸ್ಥಳೀಯ ಅಗ್ನಿಶಾಮಕದಳಕ್ಕೂ ಮಾಹಿತಿ ನೀಡಿದ್ದರು. ಎಷ್ಟೇ ಹುಡುಕಾಟ ನಡೆಸಿದ್ದರೂ ಅಭಿಷೇಕ್ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.
ಕೊನೆಗೆ ರೈಲಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಲೋಕಪಾವನಿ ನದಿ ರೈಲ್ವೆ ಬ್ರಿಡ್ಜ್ ನಿಂದ ಕಂಬಿಗೆ ಡಿಕ್ಕಿಯಾಗಿ ಕೆಳಗೆ ಬಿದ್ದಿರಬಹುದು ಎಂಬ ಶಂಕೆ ಮೇರೆಗೆ ಅಗ್ನಿಶಾಮಕದಳ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ನದಿಯಲ್ಲಿ ಶೋಧ ನಡೆಸಿದ ಮೂರು ದಿನಗಳ ಬಳಿಕ ಶ್ರೀರಂಗಪಟ್ಟಣ ಬಳಿಯ ಆರು ಕಿಲೋಮೀಟರ್ ದೂರದಲ್ಲಿ ಅಭಿಷೇಕ್ ಶವ ಪತ್ತೆಯಾಗಿದೆ.
ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.










