ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯ್ ಕುಮಾರ್ ಸಿನ್ಹಾ.

66
firstsuddi

ಪಾಟ್ನಾ: ಬಿಹಾರ ಸ್ಪೀಕರ್ ಸ್ಥಾನಕ್ಕೆ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ ಸಲ್ಲಿಸಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿ ಸರ್ಕಾರ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಹಿನ್ನೆಲೆಯಲ್ಲಿ ವಿಜಯ್ ಕುಮಾರ್ ಸಿನ್ಹಾ ತಮ್ಮ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ನಿತೀಶ್ ಕುಮಾರ್ ಅವರು ಬಿಜೆಪಿ ಮೈತ್ರಿ ತೊರೆದು, ಆರ್​ಜೆಡಿ – ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರ ರಚನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಅವರು ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಇದಕ್ಕೂ ಮುನ್ನವೇ ಭಾರತೀಯ ಜನತಾ ಪಕ್ಷದ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ ಸಲ್ಲಿಸಿದ್ದು, ಜೆಡಿಯುನ ನರೇಂದ್ರ ನಾರಾಯಣ್ ಯಾದವ್ ಅವರ ಹೆಸರನ್ನು ಸಿನ್ಹಾ ಶಿಫಾರಸು ಮಾಡಿದ್ದಾರೆ.

ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಈ ಸ್ಥಾನದಲ್ಲಿ ಕುಳಿತುಕೊಳ್ಳಲು ಬಹುಮತ ಮುಖ್ಯ. ನನ್ನನ್ನು ಈ ಆಸನದಲ್ಲಿ ಕೂರಿಸಿದ್ದಿರಿ. ಇದಕ್ಕಾಗಿ ಸಿಎಂ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು. ಅಧ್ಯಕ್ಷೀಯ ಭಾಷಣದ ನಂತರ ಅವರು ರಾಜೀನಾಮೆ ಘೋಷಿಸಿದರು.