ನವದೆಹಲಿ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಗಳು ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಈ ಸಂಬಂಧ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, ಉತ್ತರ ನೀಡುವಂತೆ ತಿಳಿಸಿದೆ. ಜೊತೆಗೆ ಅಕ್ರಮ ಬಾರ್ ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಎಲ್ಲ ಪೋಸ್ಟ್ ಡಿಲೀಟ್ ಮಾಡುವಂತೆ ಸೂಚಿಸಿದೆ. ತಮ್ಮ ಮಗಳ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಅಲ್ಲದೇ ಸಚಿವ ಸ್ಥಾನದಿಂದ ಅವರನ್ನ ವಜಾಗೊಳಿಸುವಂತೆ ಒತ್ತಾಯಿಸಿತ್ತು. ತಮ್ಮ ಮಗಳ ವಿರುದ್ಧ ಕೇಳಿ ಬಂದಿರುವ ಆರೋಪವನ್ನ ಸಂಪೂರ್ಣವಾಗಿ ಅಲ್ಲಗಳೆದಿದ್ದ ಸಚಿವೆ ಕೋರ್ಟ್ ಮೂಲಕ ಇದಕ್ಕೆ ಉತ್ತರ ನೀಡುವುದಾಗಿ ಘೋಷಣೆ ಮಾಡಿದ್ದರು.
ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ಧ ನಾನು ವಾಗ್ದಾಳಿ ನಡೆಸುತ್ತಿರುವ ಕಾರಣ ನನ್ನ ಮೇಲೆ ಇಂತಹ ಆರೋಪ ಮಾಡಲಾಗಿದೆ. ಕಾಂಗ್ರೆಸ್ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದಿದ್ದರು. ಜೊತೆಗೆ ಕೇವಲ 18 ವರ್ಷದ ಅಮಾಯಕ ಮಗಳ ಮೇಲೆ ಇಂತಹ ಆರೋಪ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದರು.










