ಚಿಕ್ಕಮಗಳೂರು : ಕ್ರಿಕೆಟ್ ಬೆಟ್ಟಿಂಗ್ ಹಣದ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಯುವಕನೋರ್ವ ಕೊಲೆಯಾದ ಘಟನೆ ನಗರದ ಕೋಟೆ ಟ್ಯಾಂಕ್ ಬಳಿ ನಡೆದಿದೆ.
ನಿನ್ನೆ ರಾತ್ರಿ ಘಟನೆ ನಡೆದಿದ್ದು, ಗವನಹಳ್ಳಿ ಮೂಲದ ಧ್ರುವರಾಜ್ ಅರಸ್ (23)ಕೊಲೆಯಾದ ಯುವಕ. ಕೊಲೆ ಬಳಿಕ ಆರೋಪಿ ವಸ್ತಾರೆಯ ಪ್ರಮೋದ್ ಸ್ಥಳದಿಂದ ಪರಾರಿ ಆಗಿದ್ದಾನೆ. ಘಟನಾ ಸ್ಥಳಕ್ಕೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಸಂಬಂಧಿಸಿದಂತೆ ಹಣದ ವ್ಯವಹಾರದ ಬಗ್ಗೆ ಮಾತನಾಡಲು ಯುವಕನನ್ನು ನಗರದ ಕೋಟೆ ಟ್ಯಾಂಕ್ ಬಳಿ ಕರೆದುಕೊಂಡು ಹೋಗಿ ಹಣ ವಸೂಲಿಗೆ ಮುಂದಾಗಿದ್ದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಡ್ಯಾಗರ್ ನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.










