ಶಿವಮೊಗ್ಗ : ರಸ್ತೆಯಲ್ಲಿ ಅಡ್ಡ ಬಂದ ಹಾವು ತಪ್ಪಿಸಲು ಹೋಗಿ ಕಾರೊಂದು ತುಂಗಾ ನಾಲೆಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಗಾಜನೂರು ಗ್ರಾಮದ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ಸುಷ್ಮಾ ಮೃತ ಮಹಿಳೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಲು ಪತ್ನಿ ಸುಷ್ಮಾ ಜೊತೆ ಚೇತನ್ ತಮ್ಮ ಇಂಡಿಕಾ ಕಾರಿನಲ್ಲಿ ತುಮಕೂರಿಗೆ ತೆರಳುತ್ತಿದ್ದರು. ಈ ವೇಳೆ ತುಂಗಾ ಎಡದಂಡೆ ಕಾಲುವೆ ಬಳಿಯಲ್ಲಿ ರಸ್ತೆಗೆ ಹಾವೊಂದು ಅಡ್ಡ ಬಂದಿದೆ. ಚೇತನ್ ಹಾವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರನ್ನು ಎಡಕ್ಕೆ ತಿರುಗಿಸಿದ್ದಾರೆ.
ಈ ವೇಳೆ, ಕಾರು ಕಾಲುವೆಗೆ ಹೋಗಿದ್ದು, ಚೇತನ್ ನನ್ನು ಸ್ಥಳೀಯರು ಮೇಲಕ್ಕೆ ಎತ್ತಿದ್ದಾರೆ. ಆದರೆ ಸುಷ್ಮಾರನ್ನು ಮೇಲಕ್ಕೆ ಎತ್ತುವಷ್ಟರಲ್ಲಿಯೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










