ನಟ ಪ್ರಕಾಶ್ ರಾಜ್ ಕನ್ನಡದ ಮೇಲಿನ ಹಿಂದಿ ಹೇರಿಕೆ ವಿರುದ್ಧ ಸಾಕಷ್ಟು ಬಾರಿ ಧ್ವನಿ ಎತ್ತಿದ್ದಾರೆ. ಈಗ ಮತ್ತೊಮ್ಮೆ ಗುಡುಗಿದ್ದಾರೆ. ಈ ಹಿಂದೆ ಪ್ರಕಾಶ್ ರಾಜ್ ‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂದು ಬರಹವಿರುವ ಟಿ ಶರ್ಟ್ ಹಾಕಿಕೊಂಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಶಶಾಂಕ್ ಶೇಖರ್ ಝಾ ಎನ್ನುವವರು ಪ್ರಕಾಶ್ ರೈ ವಿರುದ್ಧ ಎಫ್.ಐ.ಆರ್ ಹಾಕಿದ್ದೀರಾ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಕಾಶ್ ರೈ ಸಿಡಿದೆದ್ದಿದ್ದಾರೆ.
ನನ್ನ ಬೇರು.. ನನ್ನ ಮೂಲ ನನ್ನ ಕನ್ನಡ.. ನನ್ನ ತಾಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ.. ಹೆದರೊಲ್ಲ, ಅಷ್ಟೇ’ ಎಂದು ಪ್ರಕಾಶ್ ರಾಜ್ ಅವರು ಶಶಾಂಕ್ ಶೇಖರ್ ಟ್ವೀಟ್ ಗೆ ಉತ್ತರಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು. ನಾನು ಹೋಗುವಲ್ಲೆಲ್ಲಾ ಆಯಾ ಭಾಷೆಯಲ್ಲಿ ಸಂವಾದಿಸುತ್ತೇನೆ. ನನ್ನ ಭಾಷೆಯನ್ನು ಹೇರುವುದಿಲ್ಲ. ಆದರೆ ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ ಎಂದು ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ. ಜೊತೆಗೆ ಹಿಂದಿ ಹೇರಿಕೆ ನಿಲ್ಲಿಸಿ ಎನ್ನುವ ಹ್ಯಾಶ್ಟ್ಯಾಗ್ ಹಾಕಿದ್ದಾರೆ. ಪ್ರಕಾಶ್ ರಾಜ್ ಹೇಳಿಕೆಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಇನ್ನೂ ಕೆಲವರು ಟೀಕೆಯನ್ನೂ ಮಾಡಿದ್ದಾರೆ.










