ಹಿರಿಯ ನಟ ಚಂದ್ರ ಮೋಹನ್ ಹೃದಯಾಘಾತದಿಂದ ನಿಧನ…

132
firstsuddi

ತೆಲುಗು ಸಿನಿಮಾ ರಂಗದ ಖ್ಯಾತ ನಟ ಚಂದ್ರಮೋಹನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 82ರ ವಯಸ್ಸಿನ ಚಂದ್ರಮೋಹನ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.

ತೆಲುಗು ಚಿತ್ರೋದ್ಯಮದಲ್ಲಿ ದಾಖಲೆ ಎನ್ನುವಷ್ಟು ಸಿನಿಮಾಗಳಲ್ಲಿ ಚಂದ್ರ ಮೋಹನ್ ನಟಿಸಿದ್ದಾರೆ. ಈವರೆಗೂ 900ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 1966ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅವರು, ರಂಗುಲ ರತ್ನಂ ಚಿತ್ರಕ್ಕೆ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಆನಂತರ ನೂರಾರು ಸಿನಿಮಾಗಳಲ್ಲಿ ನಾಯಕರಾಗಿ, ಅನೇಕ ಚಿತ್ರಗಳಲ್ಲಿ ಸಹ ನಟರಾಗಿ ಕೆಲಸ ಮಾಡಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ ಹೆಚ್ಚಾಗಿ ಅಭಿಮಾನಿಗಳನ್ನು ರಂಜಿಸಿದ್ದರು.

ನಟ ಚಂದ್ರ ಮೋಹನ್, ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಹಿರಿಯ ನಟನ ನಿಧನಕ್ಕೆ ಅನೇಕ ಸಿನಿಮಾ ನಟರು, ನಟಿಯರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ. ರಾಜಕೀಯ ಗಣ್ಯರು ಕೂಡ ಕಂಬನಿ ಮಿಡಿದಿದ್ದಾರೆ.