ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಗಲಭೆಗೆ ಕಾರಣವಾಗಿರೋ ಆರೋಪಿಗಳ ಕುಟುಂಬಸ್ಥರಿಗೆ ಶಾಸಕ ಜಮೀರ್ ಅಹ್ಮದ್ ಫುಡ್ ಕಿಟ್ ವಿತರಣೆ ಮಾಡಲು ಮುಂದಾಗಿದ್ರು. ರಂಜಾನ್ ಹಿನ್ನೆಲೆ ಆರೋಪಿಗಳ ಕುಟುಂಬಕ್ಕೆ ತಲಾ 5 ಸಾವಿರ ಹಣ ಹಾಗೂ ಫುಡ್ ಕಿಟ್ ನೀಡಲು ಇಂದು 3 ಗಂಟೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಮೀರ್ ಕಾರ್ಯಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಏನಿದು ಘಟನೆ?:
ಹುಬ್ಬಳ್ಳಿ ಗಲಭೆ ಆರೋಪಿಗಳ ಪರ ಜಮೀರ್ ನಿಂತಿದ್ದು, ಇಂದು ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿಯಲ್ಲಿ ಗಲಭೆಕೋರರಿಗೆ 5 ಸಾವಿರ ನಗದು ಹಾಗೂ ರಂಜಾನ್ ಫುಡ್ ಕಿಟ್ ಹಂಚಿಕೆ ಮಾಡಲಾಗುತ್ತಿದ್ದು, ಕಸಬಾ ಪೇಟೆ ಪೊಲೀಸ್ ಠಾಣೆ ಬಳಿಯ ಮಸ್ತಾನ್ ಷಾ ಶಾದಿ ಮಹಲ್ ನಲ್ಲಿ ಬೆಂಬಲಿಗರ ಮೂಲಕ ಜಮೀರ್ ಅಹ್ಮದ್ ಸಹಾಯ ಮಾಡಲಿದ್ದರು. ರಂಜಾನ್ ಹಿನ್ನೆಲೆ ಮೆಕ್ಕಾದಲ್ಲಿರುವ ಜಮೀರ್ ಅಹ್ಮದ್, ಅಲ್ಲಿಂದಲೇ ಗಲಭೆಕೋರರಿಗೆ ಸಹಾಯಹಸ್ತ ಚಾಚಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಜಮೀರ್ ಅಹ್ಮದ್ ಅವರು ಮುಸ್ಲಿಮರ ಚಾಂಪಿಯನ್ ಆಗೋಕೆ ಹೊರಟಿದ್ದಾರೆ. ಆರೋಪಿಗಳ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಸಹಾಯಧನ ಉತ್ತರ ಉದ್ದೇಶವಾದರೂ ಏನು . ಆ ಮೂಲಕ ಪರೋಕ್ಷವಾಗಿ ಗಲಭೆಗೂ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಇನ್ನೂ ಹುಬ್ಬಳ್ಳಿ ಗಲಭೆಕೋರರ ಮನೆಗಳಿಗೆ ಫುಡ್ ಕಿಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಮ್ಮೀರ್ ಅಹಮದ್ ನಡೆಗೆ ಸಚಿವ ಅಶ್ವತ್ಥ್ ನಾರಾಯಣ ಖಂಡನೆ ವ್ಯಕ್ತಪಡಿಸಿದ್ರು. ಮೊದಲಿಂದಲೇ ಇದರಲ್ಲಿ ರಾಜಕೀಯ ಮಾಡುವ ಪ್ರಯತ್ನ ಮಾಡಲಾಗ್ತಿದೆ. ಇದನ್ನು ಸಂಪೂರ್ಣವಾಗಿ ಖಂಡಿಸಬೇಕಿತ್ತು ಆದರೆ ಪ್ರೋತ್ಸಾಹ ಕೊಡ್ತಾ ಇದ್ದಾರೆ ಎಂದು ಸಚಿವ ಅಶ್ವತ್ಥ್ ನಾರಾಯಣ ಕಿಡಿಕಾರಿದ್ದರು.










