ಹೊರ ರಾಜ್ಯದಿಂದ ಬೆಂಗಳೂರಿಗೆ ಬರುವವರಿಗೆ ಕೋವಿಡ್ ವರದಿ ಕಡ್ಡಾಯ : ಸಚಿವ ಸುಧಾಕರ್.

175
Firstsuddi

ಬೆಂಗಳೂರು : ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇಂದು ಬಿಬಿಎಂಪಿ ಹಾಗೂ ಜಂಟಿ ಆಯುಕ್ತರ ಜೊತೆ ಕೋವಿಡ್ ನಿಯಂತ್ರಣ ಸಂಬಂಧ ಮಹತ್ವದ ಸಭೆ ನಡೆಸಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೊರ ರಾಜ್ಯದಿಂದ ಬೆಂಗಳೂರಿಗೆ ಬರುವವರಿಗೆ ಆರ್ಟಿಪಿಸಿಆರ್ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಸಲಾಗಿದೆ ಎಂದರು.

ಏಪ್ರಿಲ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಹೊರರಾಜ್ಯಗಳಿಂದ ಬರುತ್ತಿರುವವರಲ್ಲಿ ಹೆಚ್ಚಾಗಿ ಕೋವಿಡ್ ಪ್ರಕರಣಗಳು ಕಂಡುಬರುತ್ತಿದೆ. ಕೇರಳ, ಪಂಜಾಬ್, ಮಹಾರಾಷ್ಟ್ರ, ಚಂಡೀಗಡದಿಂದ ರಾಜ್ಯಕ್ಕೆ ಬಂದವರಿಗೆ ಕೊರೊನಾ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ಕಳೆದ ವರ್ಷದ ರೀತಿಯಲ್ಲಿ ಈ ವರ್ಷವೂ ಕೂಡ ಕೋವಿಡ್ ಪಾಸಿಟಿವ್ ಸೋಂಕಿತರಿಗೆ ಕೈಗೆ ಸೀಲ್ ಹಾಕುವುದನ್ನು ಇಂದಿನಿಂದಲೇ ಕಡ್ಡಾಯ ಮಾಡಲಾಗಿದ್ದು, ಹೋಂ ಐಸೋಲೇಷನ್ನಲ್ಲಿರುವ ಪ್ರತಿಯೊಬ್ಬ ಸೋಂಕಿತರಿಗೂ ಕೈಗೆ ಸೀಲ್ ಹಾಕಲಾಗುತ್ತದೆ.

ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಮಾಸ್ಕ್ ಧರಿಸದಿದ್ದರೆ ಮಾರ್ಷಲ್ಗಳೇ ದಂಡ ವಿಧಿಸಲಿದ್ದಾರೆ. ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ಚಿತ್ರಮಂದಿರಗಳು, ಕಿಕ್ಕಿರಿದ ರಸ್ತೆಗಳು, ಮದುವೆ ಸಭಾಂಗಣಗಳು, ಧಾರ್ಮಿಕ ಸ್ಥಳಗಳು, ಕಾಲೇಜುಗಳು ಹಾಗೂ ಯಾವುದೇ ಜನದಟ್ಟಣೆ ಇರುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತಿಮುಖ್ಯವಾಗಿದೆ ಎಂದಿದ್ದಾರೆ