ಬೀದರ್ : ಅಂಗನವಾಡಿ ಕೇಂದ್ರದ ಸೆಪ್ಟಿಕ್ ಟ್ಯಾಂಕ್ ನಲ್ಲಿ ಬಿದ್ದು ಪುಟ್ಟ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಔರಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ.
3 ವರ್ಷದ ಸ್ಫೂರ್ತಿ ಊಟ ಮಾಡುವಾಗಲೇ ಊಟದ ತಟ್ಟೆ ಸಮೇತ ಸೆಪ್ಟಿಕ್ ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿದ್ದಾಳೆ. ಟ್ಯಾಂಕ್ ಮೇಲ್ಛಾವಣಿ ಮುಚ್ಚದ ಕಾರಣ ಈ ದುರ್ಘಟನೆ ನಡೆದಿದೆ. ಎಂದಿನಂತೆ ಅಂಗನವಾಡಿಗೆ ತೆರಳಿದ ಬಾಲಕಿ ಮನೆಗೆ ಬಾರದಿದ್ದಾಗ ಪೋಷಕರು ಅಂಗನವಾಡಿ ಕೇಂದ್ರಕ್ಕೆ ಹೋಗಿದ್ದಾರೆ. ಅಲ್ಲಿ ಕೂಡಾ ಮಗು ಇಲ್ಲದೆ ಇದ್ದಾಗ ಔರಾದ್ ಪಟ್ಟಣದ ಹಲವು ಕಡೆ ಹುಡುಕಾಡಿದ್ರು. ಆದರೂ ಮಗು ಸಿಗದೆ ಇದ್ದಾಗ ಅಂಗನವಾಡಿ ಕೇಂದ್ರದ ಆವರಣದಲ್ಲಿನ ಟ್ಯಾಂಕ್ ನಲ್ಲಿ ನೋಡಿದಾಗ ಬಾಲಕಿಯ ಶವ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಬಾಲಕಿ ಪೋಷಕರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಅಂಗನವಾಡಿ ಕೇಂದ್ರದ ಬಳಿ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಅಂಗನವಾಡಿ ಸಿಬ್ಬಂದಿಯ ಮಹಾ ನಿರ್ಲಕ್ಷ್ಯವೇ ಬಾಲಕಿ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಬಾಲಕಿ ಪೋಷಕರು ಔರಾದ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.










