ಅಂಗಾಂಗ ದಾನದ ಮಹತ್ವ ಸಾರಿದ ಕಾರುಣ್ಯ ರಾಮ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್…

76
firstsuddi

ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಕಾರುಣ್ಯ ರಾಮ್ ಅವರು ಒಂದಷ್ಟು ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ಹಾಗೂ ಕಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಅಂಗಾಂಗ ದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಧ್ರುವ ಸರ್ಜಾ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ನಟಿ ಕಾರುಣ್ಯ ರಾಮ್ ಅವರು, ‘ಅಂಗಾಗ ದಾನ ಮಾಡಿದರೆ ನಮ್ಮ ಮರಣದ ನಂತರವೂ ನಮ್ಮ ಉಪಯೋಗ ಆಗುತ್ತದೆ. ಈ ಕಾರ್ಯದಿಂದ ಪುಣ್ಯ ಸಿಗುತ್ತದೆ. ಹಾಗಾಗಿ ಎಲ್ಲರೂ ಅಂಗಾಗ ದಾನ ಮಾಡಿ’ ಎಂದು ಮನವಿ ಮಾಡಿದರು.

ಈ ಕುರಿತು ಮಾತನಾಡಿದ ಧ್ರುವ ಸರ್ಜಾ, ‘ಅನೇಕರಿಗೆ ನಾವು ಯೂಸ್ ಲೆಸ್ ಅಂತ ಹೇಳುತ್ತಿರುತ್ತೇವೆ. ಆದರೆ ಯಾರೂ ಕೂಡ ಯೂಸ್ ಲೆಸ್ ಅಲ್ಲ. ಯೂಸ್ಡ್ ಲೆಸ್ ಅಷ್ಟೇ! ಅಂಗಾಂಗ ದಾನ ಮಾಡಿದರೆ ಮತ್ತೊಬ್ಬರಿಗೆ ಉಪಯೋಗ ಆಗುತ್ತೆ. ನಾವು ಸತ್ತ ಬಳಿಕವೂ ಮತ್ತೊಬ್ಬರಿಗೆ ಹೆಲ್ಪ್ ಆಗುತ್ತೆ. ಎಲ್ಲರೂ ದಯವಿಟ್ಟು ಇದಕ್ಕೆ ಕೈ ಜೋಡಿಸಿ. ನಿಮ್ಮ ಪಕ್ಕದವರಿಗೂ ಹೇಳಿ. ಎಲ್ಲ ಕಡೆ ಇಂಥ ಶಿಬಿರ ಮಾಡಬೇಕು’ ಎಂದು ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 700 ರಿಂದ 1000 ಮಂದಿ ಅಂಗಾಂಗ ದಾನ ಪ್ರತಿಗೆ ಸಹಿ ಮಾಡಿದರು ಎಂಬುದು ವಿಶೇಷ. ಈ ಕಾರ್ಯಕ್ರಮದಲ್ಲಿ ಹೆಲ್ತ್ ಅಂಡ್ ವೆಲ್ತ್ ಜಾಯಿಂಟ್ ಡೈರೆಕ್ಟರ್, ಕಿಮ್ಸ್ ಅಧ್ಯಕ್ಷರು, ಆರ್ಗನ್ ಡೊನೇಷನ್ ಡಿಪಾರ್ಟ್ಮೆಂಟ್ ಭಾಗಿಯಾಗಿತ್ತು. ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ನ ಫೌಂಡರ್ ಸಂತೋಷ್ ಕೂಡ ಭಾಗಿಯಾಗಿದ್ದರು.