ಬಾಲಿವುಡ್ ನ ಖ್ಯಾತ ನಟರಾದ ಅಮಿತಾಭ್ ಬಚ್ಚನ್, ಧರ್ಮೇಂದ್ರ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಗಳು ನಾಗ್ಪುರ ಪೊಲೀಸರಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಪೊಲೀಸರು ಕೂಡಲೇ ಮುಂಬೈ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಕೂಡಲೇ ಕಾರ್ಯಾಚರಣೆ ಆರಂಭಿಸಿದ ಮುಂಬೈ ಪೊಲೀಸರು ಅಮಿತಾಭ್ ಬಚ್ಚನ್, ಮುಖೇಶ್ ಅಂಬಾನಿ ಹಾಗೂ ಧರ್ಮೇಂದ್ರ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಮಾಹಿತಿ ನೀಡಿದ್ದಾರೆ.
ನಾಗ್ ಪುರ್ ಪೊಲೀಸರಿಗೆ ಕರೆ ಮಾಡಿದ ಕಿಡಿಗೇಡಿಗಳು, ಅಮಿತಾಭ್ ಬಚ್ಚನ್, ಧರ್ಮೇಂದ್ರ ಹಾಗೂ ಮುಖೇಶ್ ಅಂಬಾನಿ ಮನೆಯಲ್ಲಿ ಬಾಂಬ್ ಇಡಲಾಗಿದೆ. ದಾದರ್ ನಲ್ಲಿ ಶಸ್ತ್ರ ಸಜ್ಜಿತವಾದ 25 ಜನರು ಭಯೋತ್ಪಾದಕ ದಾಳಿ ಮಾಡಲು ಸಿದ್ಧವಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ತನಿಖೆ ಆರಂಭಿಸಿದ ಬಳಿಕ ಈ ಮಾಹಿತಿ ಸುಳ್ಳು ಎಂಬುದು ತಿಳಿದುಬಂದಿದೆ. ಈ ರೀತಿಯ ಕರೆ ಮಾಡಿದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.










