ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಉಭಯ ಸದನ.. ಅಪ್ಪು ನೆನೆದು ಗದ್ಗದಿತರಾದ ಸಿಎಂ ಬೊಮ್ಮಾಯಿ.

57
firstsuddi

ಬೆಳಗಾವಿ : ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವಾದ ಇಂದು ವಿಧಾನ ಪರಿಷತ್ ಕಲಾಪದಲ್ಲಿ ನಟ ಪುನೀತ್ ರಾಜಕುಮಾರ್, ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ವಿಧಾನಸಭೆಯಲ್ಲಿ ಇಂದು ನಟ ಪುನೀತ್ ರಾಜ್ ಕುಮಾರ್ ಗುಣಗಾನ ಮಾಡಿ ಸಂತಾಪ ನಿರ್ಣಯ ಸಲ್ಲಿಸಿ ಗೌರವ ಸೂಚಿಸಲಾಯಿತು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಕುಳಿತಲ್ಲೇ ಗದ್ಗದಿತರಾದರು. ಬಳಿಕ ಸಂತಾಪ ಸೂಚಿಸಿ ಮಾತನಾಡಿದ ಸಿಎಂ, ಪುನೀತ್ ರಾಜಕುಮಾರ್ ಗೆ ಈಗಾಗಲೇ ಮರಣೋತ್ತರವಾಗಿ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ, ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದ ದಿನಾಂಕವನ್ನ ಶೀಘ್ರ ಪ್ರಕಟ ಮಾಡುತ್ತೇವೆ. ಅಲ್ಲದೆ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ. ವಿರೋಧ ಪಕ್ಷದ ನಾಯಕರು ಕೂಡ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಪತ್ರ ಬರೆದಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಶಿಫಾರಸು ಮಾಡಲಿದೆ. ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯ ಇದೆ ಅನ್ನಿಸುತ್ತೆ. ಯಾರೂ ಹೀಗೆ ಸಾವನ್ನ ನಿರೀಕ್ಷೆ ಮಾಡಿರಲಿಲ್ಲ. ರಾಜ್ಕುಮಾರ್ ನಿಧನದ ವೇಳೆ ಆದಂತಹ ಕಹಿ ಘಟನೆಗಳು ನಡೆಯದೇ ಜನರ ಸಹಕಾರ, ಪೊಲೀಸರ ಸಹಕಾರಿಂದ ಎಲ್ಲವೂ ವ್ಯವಸ್ಥಿತವಾಗಿತ್ತು ಎಂದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕುರಿತು ಸಂತಾಪ ಸೂಚನೆ ಮಂಡಿಸಿದ ಸಭಾಪತಿಯವರು, ಬಾಲನಟರಾಗಿ ಚಿತ್ರರಂಗ ಪ್ರವೇಶಿಸಿದ ಪುನೀತ್ ರಾಜ್ಕುಮಾರ್ ಅವರು, 10ನೇ ವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿ ಪಡೆದರು. ನಾಯಕ ನಟನಾಗಿ 32 ಚಿತ್ರಗಳಲ್ಲಿ ನಟಿಸಿದರು. ಅಪ್ಪು ಚಿತ್ರದಿಂದ ಆರಂಭಿಸಿ ಯುವರತ್ನದವರೆಗೂ ಪ್ರತಿಯೊಂದು ಚಿತ್ರದಲ್ಲೂ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಚಲನಚಿತ್ರ ಹೊರತಾಗಿಯೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದರು. ಡಾ.ರಾಜ್ ಫೌಂಡೇಶನ್ ತಂಡ ಕಟ್ಟಿ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ಹಲವಾರು ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ ಎಂದು ಪುನೀತ್ ಸಾಧನೆಯನ್ನು ಕೊಂಡಾಡಿದರು.

ನಟ ಪುನೀತ್ ರಾಜ್ ಕುಮಾರ್ ನಿಧನದ ವೇಳೆ ಅವರ ಅಂತ್ಯ ಸಂಸ್ಕಾರಕ್ಕೆ ಸರ್ಕಾರ ಅಚ್ಚುಕಟ್ಟಾದ ನಿರ್ವಹಣೆ ಮಾಡಿ ಎಲ್ಲಿಯೂ ಯಾವ ಲೋಪವೂ ಆಗದಂತೆ ನೋಡಿಕೊಂಡಿತು. ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಎಸ್.ಆರ್. ಪಾಟೀಲ್ ಸರ್ಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇನ್ನು ಮೂರು ಪಡೆಗಳ ಮೊದಲ ಮುಖ್ಯಸ್ಥರಾಗಿದ್ದ ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಪ್ರಕರಣವನ್ನು ಆಳವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ನಂತರ ಸಭಾಪತಿ ಬಸವರಾಜ ಹೊರಟ್ಟಿ ಮೃತರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನೂ ಕರುಣಿಸಲಿ ಎಂದು ತಿಳಿಸುತ್ತಾ ಸದನದಲ್ಲಿ ಒಂದು ನಿಮಿಷ ಮೌನಾಚರಿಸಿ ಸಂತಾಪ ಸೂಚಿಸಿ ಮೃತರಿಗೆ ಗೌರವ ಸಲ್ಲಿಸಿದರು.