ನವದೆಹಲಿ : ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಗ್ನಿಪಥ್ ಯೋಜನೆಗೆ ಕೇಂದ್ರದ ಸಂಪುಟ ಸಮಿತಿಯಲ್ಲಿ ಇಂದು ಅನುಮೋದನೆ ದೊರಕಿದ್ದು, ಇದೊಂದು ಐತಿಹಾಸಿಕ ನಿರ್ಧಾರ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸಿದ ನಂತರ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಗ್ನಿಪಥ್ ನೇಮಕಾತಿ ಯೋಜನೆಯಡಿಯಲ್ಲಿ ಸಶಸ್ತ್ರ ಪಡೆಗಳಲ್ಲಿ ಯೋಧರ ಸರಾಸರಿ ವಯಸ್ಸು 26 ವರ್ಷಗಳಾಗಿರಲಿವೆ. ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಯುವಕರನ್ನು ನೇಮಿಸಿಕೊಳ್ಳಲಾಗುವುದು. ಅಗ್ನಿವೀರ್ಸ್ ಗೆ ಉತ್ತಮ ವೇತನ ಪ್ಯಾಕೇಜ್ ಮತ್ತು 4 ವರ್ಷಗಳ ಸೇವೆಯ ನಂತರ ನಿರ್ಗಮನ ನಿವೃತ್ತಿ ಪ್ಯಾಕೇಜ್ ನೀಡಲಾಗುವುದು. ಅಲ್ಲದೇ ಇದರಿಂದ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗಲಿದ್ದು, ನಿರುದ್ಯೋಗ ದೂರವಾಗಲಿದೆ ಎಂದು ಹೇಳಿದ್ದಾರೆ.
ಈ ಯೋಜನೆಯು ಯುವಕರಿಗೆ ಸಶಸ್ತ್ರ ಪಡೆಗಳ ನಿಯಮಿತ ಕೇಡರ್ ನಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ಒದಗಿಸುತ್ತದೆ. ‘ಅಗ್ನಿಪಥ್’ ಯೋಜನೆಯಡಿ ನೇಮಕಗೊಂಡವರೆಲ್ಲರನ್ನು ‘ಅಗ್ನಿವೀರ್’ ಎಂದು ಕರೆಯಲಾಗುವುದು. ತರಬೇತಿ ಅವಧಿ ಸೇರಿದಂತೆ 4 ವರ್ಷಗಳ ಸೇವಾ ಅವಧಿಗೆ ಅಗ್ನಿವೀರ್ ಗಳನ್ನು ನೋಂದಾಯಿಸಿಕೊಳ್ಳಲಾಗುತ್ತದೆ. ನಾಲ್ಕು ವರ್ಷಗಳ ನಂತರ, ಕೇವಲ 25% ಅಗ್ನಿವೀರ್ ಗಳನ್ನು ಅರ್ಹತೆ, ಇಚ್ಛೆ ಮತ್ತು ವೈದ್ಯಕೀಯ ಫಿಟ್ ನೆಸ್ ಆಧಾರದ ಮೇಲೆ ನಿಯಮಿತ ಕೇಡರ್ ನಲ್ಲಿ ಉಳಿಸಿಕೊಳ್ಳಲಾಗುತ್ತದೆ.
ಇನ್ನು, ಸಿಡಿಎಸ್ ನೇಮಕಾತಿ ಕುರಿತು ಮಾತನಾಡಿರುವ ರಾಜನಾಥ್ ಸಿಂಗ್, ಶೀಘ್ರವೇ ಸಿಡಿಎಸ್ ನೇಮಕ ಮಾಡಲಾಗುವುದು. ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಹೇಳಿದ್ದಾರೆ.
2021ರ ಡಿಸೆಂಬರ್ ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತದ ಮೊದಲ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹುತಾತ್ಮರಾಗಿದ್ದರು. ಆ ಬಳಿಕ ಸಿಡಿಎಸ್ ಹುದ್ದೆ ತೆರವಾಗಿದೆ. ಈಗ ಸರ್ಕಾರವು ಸಶಸ್ತ್ರ ಪಡೆಗಳ ಸೇವಾ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಸರ್ಕಾರದ ಅಧಿಸೂಚನೆಯ ಪ್ರಕಾರ, ಸೇವೆಯಲ್ಲಿರುವ ಅಥವಾ 62ಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ಲೆಫ್ಟಿನೆಂಟ್ ಜನರಲ್, ಏರ್ ಮಾರ್ಷಲ್ ಹಾಗೂ ವೈಸ್–ಅಡ್ಮಿರಲ್ ಸಿಡಿಎಸ್ ಹುದ್ದೆಗೆ ಅರ್ಹರಾಗಿರುತ್ತಾರೆ.










