ಚಿಕ್ಕಮಗಳೂರು : ಗ್ರಾಮೀಣರಿಂದಾಗಿ ಆಧುನಿಕತೆಯ ಅಬ್ಬರದ ನಡುವೆಯೂ ಜಾನಪದ ಕಲೆ ಮತ್ತು ಸಾಹಿತ್ಯ ಇಂದಿಗೂ ಜೀವಂತವಾಗಿ ಉಳಿದಿದೆ ಎಂದು ಕಡೂರು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
ಕಡೂರು ತಾಲ್ಲೂಕಿನ ಹೇಮಗಿರಿಯ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಪ್ರಥಮ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಾನಪದ ನಮ್ಮ ಸಂಸ್ಕೃತಿಯ ತಾಯಿಬೇರು ಅದು ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದ ಅವರು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದಿನ ಯುವಜನತೆ ಚಿಂತನೆ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ಜೂ.25 ರಂದು ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಪ್ರಥಮ ಜಾನಪದ ಸಮ್ಮೇಳನ ನಡೆಯಲಿದ್ದು, ಅದರ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ವಿವಿಧ ಜಾನಪದ ಕಲಾ ತಂಡಗಳು ಸಮ್ಮೇಳನದಲ್ಲಿ ಭಾಗವಹಿಸಲಿವೆ, ನಾಡಿನ ಅನೇಕ ಗಣ್ಯರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ, ಸಾಹಿತಿ ಚಟ್ನಹಳ್ಳಿ ಮಹೇಶ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಕಡೂರು ಶಾಸಕ ಬೆಳ್ಳಿಪ್ರಕಾಶ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹಾಗೂ ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದಯಾನಂದ್ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕುಂಕನಾಡು ನಾಗರಾಜು, ತಾಲ್ಲೂಕು ಅಧ್ಯಕ್ಷ ಎ.ಎಂ.ಜಗದೀಶ್ವರಾಚಾರ್, ಯಗಟಿ ಹೋಬಳಿ ಅಧ್ಯಕ್ಷ ಪರಮೇಶ್ವರಪ್ಪ, ಹಾಲುಸ್ವಾಮಿ, ದೇವರಾಜ್, ಶೈಲಜಾ. ಸಿದ್ದಪ್ಪ ಹಾಜರಿದ್ದರು.










