ಬೆಂಗಳೂರು : ಇಸ್ಕಾನ್ ನಿರ್ಮಿಸಿರುವ ರಾಜಾಧಿರಾಜ ಗೋವಿಂದ ದೇವಾಲಯವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಿದ್ದಾರೆ. ನಗರದ ಕನಕಪುರ ರಸ್ತೆಯ ವಸಂತಪುರದಲ್ಲಿ ಈ ನೂತನ ದೇವಾಲಯ ನಿರ್ಮಿಸಲಾಗಿದ್ದು, ದೇವಾಲಯಕ್ಕೆ ಇಂದು ಬೆಳಿಗ್ಗೆ ರಾಷ್ಟ್ರಪತಿ ಕೋವಿಂದ್ ಅವರು ಪತ್ನಿ ಸವಿತಾ ಜೊತೆ ಆಗಮಿಸಿ ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದರ ಪ್ರತಿಮೆಗೆ ನಮಿಸಿ ಆನಂತರ ದೇವಸ್ಥಾನವನ್ನು ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ‘ಭಕ್ತಿಭಾವದ ಪ್ರತೀಕವೇ ಈ ದೇವಾಲಯ. ದೇವಾಲಯಗಳು ಹಿಂದೂ ಧರ್ಮದ ಚಿಹ್ನೆಗಳು. ಅದ್ವೈತ್ವ, ವಿಶಿಷ್ಟಾದೈತ್ವ, ಜ್ಞಾನ, ಕರ್ಮ, ಭಕ್ತಿ ಮಾರ್ಗಗಳಿಂದ ಬಂದಿವೆ. ಭಗವದ್ಗೀತೆಯನ್ನು ಸ್ಮರಿಸುವಾಗ ಪ್ರಭುಪಾದರನ್ನು ನೆನೆಸುತ್ತೇವೆ. ದೇವಸ್ಥಾನಗಳು ಒಂದು ಶಾಂತಿಯುತವಾದ ಸ್ಥಳಗಳು. ಈ ವರ್ಷ ಶ್ರೀಪ್ರಭುಪಾದರು 125ನೇ ವರ್ಷ ಪೂರೈಸುತ್ತಿದ್ದಾರೆ. ನಾನು ಈ ದೇವಾಲಯದ ಕಲೆಯನ್ನು ಗಮನಿಸಿದೆ, ಇದು ನಿಜಕ್ಕೂ ಸುಂದರವಾದ ಕಲೆಯಾಗಿದೆ ಎಂದು ಹೊಗಳಿದರು.










