ಬೆಂಗಳೂರು : ಅತ್ಯಾಚಾರ ಕುರಿತ ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಕ್ಷಮೆಯಾಚಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘ಅತ್ಯಾಚಾರ’ ಸಂಬಂಧ ಅಧಿವೇಶನದಲ್ಲಿ ನೀಡಿರುವ ನನ್ನ ಹೇಳಿಕೆ ಕುರಿತು ಎಲ್ಲರಿಗೂ ನನ್ನ ಪ್ರಾಮಾಣಿಕ ಕ್ಷಮೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಅತ್ಯಂತ ಹೇಯವಾದ ಅಪರಾಧವನ್ನು ಅಲಕ್ಷಿಸುವುದು ನನ್ನ ಉದ್ದೇವಾಗಿರಲಿಲ್ಲ. ಮಾತಿನ ಭರದಲ್ಲಿ ಆ ಮಾತು ಬಂದಿದೆ. ಇನ್ಮುಂದೆ ಇನ್ನು ಮುಂದೆ ನಾನು ಬಹಳ ಎಚ್ಚರಿಕೆಯಿಂದ ಮಾತನಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನಿನ್ನೆ ವಿಧಾನಸಭೆಯಲ್ಲಿ ಮಾತನಾಡುತ್ತಾ ಅತ್ಯಾಚಾರ ಆದಾಗ ತಡೆಯಲು ಸಾಧ್ಯವಾಗದಿದ್ದರೆ ಮಲಗಿ ಆನಂದಿಸಿ ಎಂದು ರಮೇಶ್ ಕುಮಾರ್ ಹೇಳಿಕೆ ನೀಡಿದ್ದರು. ರಮೇಶ್ ಕುಮಾರ್ ಈ ರೀತಿ ಹೇಳುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಮಂದಿ ಸದಸ್ಯರು ಇದನ್ನು ತಮಾಷೆಯಾಗಿ ತೆಗೆದುಕೊಂಡರು.
ಇತ್ತ ರಮೇಶ್ ಅವರ ಈ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿತ್ತು. ರಮೇಶ್ ಕುಮಾರ್ ಅವರು ಮಾತನಾಡಿರುವುದು ಅಕ್ಷಮ್ಯ ಅಪರಾಧ. ಇಡೀ ದೇಶವೇ ಸದನವನ್ನು ನೋಡುತ್ತಿದೆ. ಮಹಿಳೆಯರನ್ನು ಗೌರವಿಸುವ, ಹೆಣ್ಣನ್ನು ಪೂಜಿಸುವ ಭಾರತದಲ್ಲಿ ಈ ರೀತಿ ಹೇಳಿಕೆ ನೀಡುವುದು, ಪವಿತ್ರವಾದ ಸ್ಥಾನದಲ್ಲಿರುವ ಸದನದಲ್ಲಿ ಈ ರೀತಿ ಅಕ್ಷಮ್ಯವಾಗಿ ಮಾತನಾಡುವುದು ತಪ್ಪು. ಸದನದಲ್ಲಿ ರಮೇಶ್ ಕುಮಾರ್ ಅವರು ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಸದನದ ಬಾವಿಗಿಳಿದು ಹೋರಾಟ ನಡೆಸಲು ಮುಂದಾಗುತ್ತೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಇತರ ಬಿಜೆಪಿ ಶಾಸಕಿಯರು ಆಗ್ರಹಿಸಿದ್ದರು.










