ಅದ್ಧೂರಿಯಾಗಿ ಹಸೆಮಣೆ ಏರಿದ ನಾಗ ಚೈತನ್ಯ ಶೋಭಿತಾ ಧೂಳಿಪಾಲ.

45

ದಕ್ಷಿಣ ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ ಹಾಗೂ ಬಹುಭಾಷಾ ನಟಿ ಶೋಭಿತಾ ಧೂಳಿಪಾಲ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಬುಧವಾರ ತಡ ರಾತ್ರಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಅನ್ನಪೂರ್ಣ ಸ್ಟುಡಿಯೋದಲ್ಲಿ ಜೋಡಿ ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ಹಸೆಮಣೆ ಏರಿದರು. ಈ ಸಮಾರಂಭದಲ್ಲಿ ಕುಟುಂಬದವರು, ಚಿತ್ರರಂಗದ ಗಣ್ಯರು, ಆಪ್ತರು, ಬಂಧುಗಳು ಪಾಲ್ಗೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ ಕೂಡಾ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗಳನ್ನು ಆಶೀರ್ವದಿಸಿದರು. ಅದ್ಧೂರಿ ವಿವಾಹ ಸಮಾರಂಭದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಸದ್ಯ ಈ ಮದುವೆ ಕಾರ್ಯಕ್ರಮದ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಪ್ರೇಮಪಕ್ಷಿಗಳ ನಿಶ್ಚಿತಾರ್ಥ ಸಮಾರಂಭ ಆಗಸ್ಟ್ ನಲ್ಲಿ ನಡೆದಿದ್ದು ನಿಮಗೆ ತಿಳಿದೇ ಇದೆ. ಮತ್ತೊಂದೆಡೆ, ನಾಗ ಚೈತನ್ಯ ಸಹೋದರ, ನಟ ಅಖಿಲ್ ಅವರು ಸಹ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ. ಶೋಭಿತಾ ಧೂಳಿಪಾಲ ಅವರು 2013ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು ಅವರೊಂದಿಗೆ ನಾಗ ಚೈತನ್ಯ 2017ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದರು. ಬಹಳ ವರ್ಷಗಳ ಪ್ರೀತಿ ಅಭಿಮಾನಿಗಳ ಮನಗೆದ್ದಿತ್ತು. ಆದರೆ 2021ರಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ಈ ಜೋಡಿ ವಿಚ್ಛೇದನ ಪಡೆಯಿತು. ಸ್ಟಾರ್ ಹೀರೋಯಿನ್ ಸಮಂತಾ ರುತ್ ಪ್ರಭು ಸದ್ಯ ತಮ್ಮ ಆರೋಗ್ಯ ಮತ್ತು ವೃತ್ತಿಜೀನದ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ನಾಗ ಚೈತನ್ಯ ಅವರು ನವಾರಂಭದ ಖುಷಿಯಲ್ಲಿದ್ದಾರೆ. ಸಾಮಾಜಿಕ ಜಾಳತಾಣದಲ್ಲೀಗ ಮದುವೆಯ ಫೋಟೋ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದ್ದು, ನವದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.