ಅಧಿಕಾರಿಗಳು ಮನಸ್ಸು ಮಾಡಿದರೆ ಯಾವ ಕೆಲಸ ಬೇಕಾದರೂ ಸಾಧಿಸುತ್ತಾರೆ ಎಂಬುದಕ್ಕೆ ನಾಗರಾಜ್ ಉದಾಹರಣೆ : ಹೆಚ್.ಹೆಚ್.ದೇವರಾಜ್.

86
firstsuddi

ಚಿಕ್ಕಮಗಳೂರು : ಅರೆ ನ್ಯಾಯಿಕ ಪ್ರಕರಣಗಳ ವಿಲೇವಾರಿಯಲ್ಲಿ ನಗರದ ಉಪವಿಭಾಗಾಧಿ ಕಾರಿಗಳ ಕಛೇರಿ ರಾಜ್ಯಕ್ಕೆ ಮಾದರಿಯಾಗಿರುವ ಹಿನ್ನೆಲೆಯಲ್ಲಿ ಎಸಿ ಡಾ|| ಹೆಚ್.ಎಲ್.ನಾಗರಾಜ್ ಅವರನ್ನು ಜೆಡಿಎಸ್ ಮತ್ತು ಬಿಎಸ್‍ಪಿ ಮುಖಂಡರು ನಗರದಲ್ಲಿ ನಿನ್ನೆ ಆತ್ಮೀಯವಾಗಿ ಅಭಿನಂದಿಸಿದರು.

ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ಕಛೇರಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವಲ್ಲಿ ಶ್ರಮಿಸಿದ ಎಸಿ ಡಾ|| ಹೆಚ್.ಎಲ್.ನಾಗರಾಜ್ ಅವರಿಗೆ ಎರಡೂ ಪಕ್ಷಗಳ ಮುಖಂಡರು ಹಾರ ಹಾಕಿ ಶಾಲು ಹೊದಿಸಿ ಸನ್ಮಾನಿಸಿ ಅವರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಮಾತನಾಡಿ ಅಧಿಕಾರಿಗಳು ಮನಸ್ಸು ಮಾಡಿದರೆ ಯಾವ ಕೆಲಸವನ್ನು ಬೇಕಾದರೂ ಸಾಧಿಸುತ್ತಾರೆ ಎಂಬುದಕ್ಕೆ ಜನಪರ ಅಧಿಕಾರಿ ನಾಗರಾಜ್ ಉದಾಹರಣೆಯಾಗಿದ್ದಾರೆ ಎಂದರು.

ಇಂತಹ ಅಧಿಕಾರಿಗಳು ಎಲ್ಲಾ ಕಛೇರಿಗಳಲ್ಲೂ ಇದ್ದರೆ ಬಡವರು ಮತ್ತು ಸಾಮಾನ್ಯ ಜನರ ಸಮಸ್ಯೆ ನಿವಾರಣೆಯಾಗಿ ಅವರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ರೈತರು, ಕಾರ್ಮಿಕರು, ದಲಿತರು, ಅಸಹಾಯಕರು ಮತ್ತು ಜನಸಾಮಾನ್ಯರ ಪರವಾಗಿ ಕಾರ್ಯನಿರ್ವಹಿಸಿ ಜಿಲ್ಲೆಗೆ ಕೀರ್ತಿ ತಂದಿರುವ ಉಪವಿಭಾಗಾಧಿಕಾರಿ ನಾಗರಾಜ್ ಅವರನ್ನು ಸನ್ಮಾನಿಸುತ್ತಿರುವುದು ತಮಗೆ ಹೆಮ್ಮೆ ತಂದಿದೆ ಎಂದು ತಿಳಿಸಿದರು.

ಎಲ್ಲಾ ಅಧಿಕಾರಿಗಳೂ ನಾಗರಾಜ್ ಅವರ ಕಾರ್ಯವೈಖರಿಯನ್ನು ಮಾದರಿಯಾಗಿ ತೆಗೆದು ಕೊಳ್ಳಬೇಕು. ಅವರಂತೆ ಅಹರ್ನಿಶಿ ದುಡಿದು ಜನಸಾಮಾನ್ಯರ ಸೇವೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ತಹಶೀಲ್ದಾರ್ ಡಾ|| ಕೆ.ಜೆ.ಕಾಂತರಾಜ್, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಮಂಜಪ್ಪ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಪ.ಜಾತಿ, ಪ.ವರ್ಗ ವಿಭಾಗದ ಅಧ್ಯಕ್ಷ ಹುಣಸೇಮಕ್ಕಿ ಲಕ್ಷ್ಮಣ್, ಕಟ್ರಮನೆ ಕೆ.ಎಲ್.ಪ್ರಸನ್ನ, ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಹಾಜರಿದ್ದರು.