ಕಾಬೂಲ್ (ಅಫ್ಘಾನಿಸ್ತಾನ) : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ನಿನ್ನೆ ತಾಲಿಬಾನ್ ವಶಕ್ಕೆ ಪಡೆದಿದ್ದು, ಈ ಮೂಲಕ ಅಫ್ಘಾನ್ ಆಡಳಿತ ಉಗ್ರರ ಪಾಲಾಗಿದೆ.
ಅಫ್ಘಾನಿಸ್ತಾನ ಸರ್ಕಾರವು ತಾಲಿಬಾನ್ ಪಡೆಗಳಿಗೆ ಶರಣಾದ ನಂತರ ಮುಲ್ಲಾ ಅಬ್ದುಲ್ ಘನಿ ಬರದಾರ್ ಅವರನ್ನು ತಾಲಿಬಾನ್ ಆಡಳಿತದಲ್ಲಿ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಿ ಘೋಷಿಸಲಾಗಿದೆ.
ತಾಲಿಬಾನ್ ಉಗ್ರರು ನಿನ್ನೆ ಕಾಬೂಲ್ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಅಲ್ಲಿನ ಅಧ್ಯಕ್ಷ ಆಶ್ರಫ್ ಘನಿ ದೇಶದಿಂದ ತಜಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆಂದು ತಿಳಿದು ಬಂದಿದೆ. ಬರುವ ದಿನಗಳಲ್ಲಿ ನಡೆಯಲಿರುವ ರಕ್ತಪಾತ ತಪ್ಪಿಸುವ ಉದ್ದೇಶದಿಂದ ದೇಶ ಬಿಡುತ್ತಿರುವುದಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಅಧ್ಯಕ್ಷರು ಪಲಾಯನ ಮಾಡುತ್ತಿದ್ದಂತೆ ಅಫ್ಘಾನ್ ಸರ್ಕಾರ ಪತನಗೊಂಡಿದ್ದು, ದೇಶದ ಸಾವಿರಾರು ಜನರು ಜೀವಭಯದಿಂದ ಎಲ್ಲಾದರು ಹೋಗಿ ಬದುಕು ಕಟ್ಟಿಕೊಳ್ಳುವ ಹಾದಿ ಹಿಡಿದಿದ್ದಾರೆ.
ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನಲ್ಲಿ ಅಮೆರಿಕ ಸೇನೆ ನಿಯೋಜನೆ ಮಾಡಿತ್ತು. ಆದರೆ ಇದೀಗ ದಿಢೀರ್ ಆಗಿ ಹಿಂಪಡೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೇ ತಾಲಿಬಾನ್ ಉಗ್ರರು ಒಂದರ ಮೇಲೆ ಒಂದರಂತೆ ಎಲ್ಲ ನಗರ ವಶಕ್ಕೆ ಪಡೆದುಕೊಂಡಿದ್ದು, ಇದೀಗ ಕಾಬೂಲ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಇದೇ ವಿಷಯನ್ನಿಟ್ಟುಕೊಂಡು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜೀನಾಮೆಗೆ ಆಗ್ರಹಿಸಿದ್ದಾರೆ.










