ಹಾಸನ : ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರೊಂದು ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ.
ಕಡೂರು ಮೂಲದ ಮಲ್ಲಿಕಾರ್ಜುನ್ ಎಂಬುವವರು ಉಪಹಾರಕ್ಕೆಂದು ಕಾರನ್ನು ಅರಸೀಕೆರೆ ಪಟ್ಟಣದಲ್ಲಿರುವ ಮಂಜು ಫಾಸ್ಟ್ ಫುಡ್ ಅಂಗಡಿಯ ಮುಂದೆ ಪಾರ್ಕಿಂಗ್ ಮಾಡಿದ್ದಾರೆ. ಈ ವೇಳೆ ಕಾರಿನ ಮುಂಭಾಗಕ್ಕೆ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿದೆ.
ತಕ್ಷಣ ಮಾಲೀಕ ಮಲ್ಲಿಕಾರ್ಜುನ್ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಅಷ್ಟರಲ್ಲಿ ಕಾರ್ ಭಾಗಶಃ ಬೆಂಕಿಗಾಹುತಿಯಾಗಿದೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಹಿನ್ನೆಲೆಯಲ್ಲಿ ಕಾರು ಹೊತ್ತಿ ಉರಿದಿದೆ ಎಂದು ಶಂಕಿಸಲಾಗಿದೆ.










