ಆಕ್ರೋಶಕ್ಕೆ ಕಾರಣವಾದ ‘ಶರಣರ ಶಕ್ತಿ’ಸಿನಿಮಾ: ಪ್ರಮುಖ ಲಿಂಗಾಯತ ಮುಖಂಡರಿಗಾಗಿ ವಿಶೇಷ ಪ್ರದರ್ಶನ.

36

ಬೆಂಗಳೂರು: ಬಸವಾದಿ ಶರಣರನ್ನು ಅವಮಾನಿಸುವ, ಶರಣರ ತತ್ವ-ಸಿದ್ಧಾಂತ ತಿರುಚುವ, ಶರಣರ ಆಶಯಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ ‘ಶರಣರ ಶಕ್ತಿ’ ಚಲಚನಚಿತ್ರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಲಿಂಗಾಯತ ಪ್ರಮುಖ ಮುಖಂಡರಿಗಾಗಿ ವಿಶೇಷ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ. ಶರಣರ ಶಕ್ತಿ ಸಿನಿಮಾ ಆಕ್ಟೋಬರ್ 18 ರಂದು ರಿಲೀಸ್ ಮಾಡಲು ಸಿದ್ಧತೆ ಮಾಡಲಾಗಿದೆ. ಬಸವಣ್ಣ, ಚನ್ನಬಸವಣ್ಣ ಮತ್ತು ಇತರ ಶರಣರ ಕಥೆಗಳಿಗೆ ಜೀವ ತುಂಬುವ ಶರಣರ ಶಕ್ತಿ ಸಿನಿಮಾವು 12 ನೇ ಶತಮಾನದ ಕಥೆ ಎಂದು ಚಿತ್ರದ ನಿರ್ದೇಶಕರು ವಿವರಿಸಿದ್ದಾರೆ. ಅನುಭವ ಮಂಟಪ, ಪವಿತ್ರ ಇಷ್ಟಲಿಂಗ ಮತ್ತು ಶರಣರ ಬಲಿದಾನದ ಮೇಲೆ ಸಮಾಜ ಮತ್ತು ಆಧ್ಯಾತ್ಮಿಕತೆಗೆ ಅವರ ಅಳಿಸಲಾಗದ ಕೊಡುಗೆಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ ಎಂದಿದ್ದಾರೆ. ಮಠಾಧೀಶರು ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ ಗುಂಪುಗಳ ಸದಸ್ಯರು ಸೇರಿದಂತೆ ಲಿಂಗಾಯತ ಮುಖಂಡರು ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಸೋಮವಾರ ಮಲ್ಲೇಶ್ವರಂನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮಾಜಿ ಐಎಎಸ್ ಅಧಿಕಾರಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಮುಖರಾದ ಎಸ್.ಎಂ.ಜಾಮದಾರ್ ಅವರು ಭಾಗವಹಿಸಿದ್ದರು. ಚಲನಚಿತ್ರವನ್ನು ವೀಕ್ಷಿಸಿದ ನಂತರ, “ಅನೇಕ ಆಕ್ಷೇಪಾರ್ಹ ವಿಷಯಗಳಿವೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಚಿತ್ರದ ವಿವಾದಾತ್ಮಕ ಅಂಶಗಳನ್ನು ವಿವರವಾಗಿ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು. ಲಿಂಗಾಯತ ಮಠಾಧೀಶರು ಮತ್ತು ಗದಗಿನ ಸಮುದಾಯದ ಮುಖಂಡರಾದ ಸಿದ್ದರಾಮ ಸ್ವಾಮೀಜಿ, ಬೆಳ್ಳಿಮಠ ಸ್ವಾಮೀಜಿ, ಬಸವ ಯೋಗಿ ಸ್ವಾಮೀಜಿ, ಟಿ.ಆರ್.ಚಂದ್ರಶೇಖರ್, ಅರವಿಂದ್ ಜತ್ತಿ ಸೇರಿದಂತೆ ಅನೇಕ ವಿದ್ವಾಂಸರು ಮತ್ತು ಸಮುದಾಯದ ಮುಖಂಡರು ಸಿನಿಮಾ ವೀಕ್ಷಿಸಿದರು.ಸಿನಿಮಾ ನೋಡುವಾಗ ಅನೇಕರು ಕಾಗದದ ತುಂಡುಗಳಲ್ಲಿ ಟಿಪ್ಪಣಿಗಳನ್ನು ಮಾಡುತ್ತಿರುವುದು ಕಂಡುಬಂದಿತು.