ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಎಎಪಿ ಮಾಜಿ ನಾಯಕ ಕೈಲಾಶ್ ಗೆಹ್ಲೋಟ್.

51

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ಎಎಪಿ ನಾಯಕ ಕೈಲಾಶ್ ಗೆಹ್ಲೋಟ್ ಇಂದು ಮಧ್ಯಾಹ್ನ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷ ಸೇರ್ಪಡೆ ಕುರಿತಂತೆ ಈಗಾಗಲೇ ತಮ್ಮ ಆಪ್ತರೊಂದಿಗೆ ಹಾಗೂ ಬಿಜೆಪಿ ಹಿರಿಯ ನಾಯಕರೊಂದಿಗೆ ಗೌಪ್ಯವಾಗಿ ಚರ್ಚಿಸಿದ್ದಾರೆ. ಹೀಗಾಗಿ ಅಂತಿಮ ನಿರ್ಧಾರವನ್ನು ಸಧ್ಯದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಕೈಲಾಶ್ ಗೆಹ್ಲೋಟ್ ತಮ್ಮ ಸಚಿವ ಸ್ಥಾನ ಹಾಗೂ ಪಕ್ಷದ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ನೀಡಿದ್ದರು. ಮುಖ್ಯಮಂತ್ರಿ ಆತಿಶಿ ನೇತೃತ್ವದ ಸಂಪುಟದಲ್ಲಿ ಸಾರಿಗೆ, ಗೃಹ ಸೇರಿದಂತೆ ಮಹತ್ವದ ಖಾತೆಗಳನ್ನು ನಿಭಾಯಿಸುತ್ತಿದ್ದರು. ರಾಷ್ಟ್ರಧಾನಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಕೈಲಾಶ್ ಗೆಹ್ಲೋಟ್ ರಾಜೀನಾಮೆ ಆಮ್ ಆದ್ಮಿ ಪಾರ್ಟಿಗೆ ಪ್ರಸ್ತುತ ಹಿನ್ನೆಡೆಯಾಗಿ ಪರಿಣಮಿಸಿದೆ. ಜತೆಗೆ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ರಾಜೀನಾಮೆ ಸಂದರ್ಭದಲ್ಲಿ ಕೈಲಾಶ್ ಗೆಹ್ಲೋಟ್ ಆಪ್ ಸಂಚಾಲಕ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‍ಗೆ ಪ್ರತ್ಯೇಕವಾಗಿ ಪತ್ರ ಬರೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಪಕ್ಷ ಸಂಪೂರ್ಣ ಸೋತಿದೆ. ಯಮುನಾ ನದಿ ಶುದ್ದೀಕರಣಗೊಳಿಸುವ ಭರವಸೆಯನ್ನೂ ಈಡೇರಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಯಮುನಾ ನದಿ ಮೊದಲಿಗಿಂತಲೂ ಹೆಚ್ಚು ಮಲಿನವಾಗಿದೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಜತೆಗೆ ಕೇಜ್ರಿವಾಲ್ ಅಧಿಕೃತ ನಿವಾಸವಾಗಿದ್ದ ‘ಶೀಶಮಹಲ್’ ನವೀಕರಣದ ವಿವಾದದ ಕುರಿತೂ ಪ್ರಸ್ತಾಪಿಸಿದ್ದಾರೆ.