ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸಲ್ಲಿಸಿದ ಅರ್ಜಿ ಹೈಕೋರ್ಟ್‍ನಲ್ಲಿ ವಜಾ ಆಗಿದ್ದು, ಈ ಕುರಿತು ಮುಂದಿನ ವಾರ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸುತ್ತೇನೆ. ನನಗೆ ಈ ತೀರ್ಪು ಸ್ವಲ್ವ ಹಿನ್ನೆಡೆಯಾಗಿದೆ. ಆದರೂ ಹೋರಾಟ ಮುಂದುವರೆಸುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ ತೀರ್ಪು ಬಳಿಕ ಸುದ್ದಿಗಾರರಿಗೆ ಹೇಳಿಕೆ ನೀಡಿದರು. ಲೋಕಾಯುಕ್ತ ಸಂಸ್ಥೆಯ ವರದಿ ಬಗ್ಗೆ ನನಗೆ ವಿಶ್ವಾಸವಿಲ್ಲ. ಆರೋಪಿಗಳನ್ನು ರಕ್ಷಣೆ ಮಾಡುವಂತೆ ಲೋಕಾಯುಕ್ತ ತನಿಖೆ ನಡೆಸಿದೆ ಎಂದು ನನಗೆ ಈಗಲೂ ಅನುಮಾನಗಳಿವೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು. ನಮ್ಮ ಅರ್ಜಿ ವಜಾವಾಗಿದೆ ಎಂದು ತಿಳಿದು ಬಂದಿದೆ. ನಮ್ಮ ಹೋರಾಟಕ್ಕೆ ಹಿನ್ನೆಡೆಯಾಗಿದೆ. ಇದರಿಂದ ವಿಚಲಿತನಾಗುವ ಹಾಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟ ಮುಂದುವರೆಸುತ್ತೇವೆ. ಮುಂದಿನ ವಾರ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನೆ ಮಾಡಲಾಗುತ್ತದೆ. ಹಾಗೂ ಈ ಪ್ರಕರಣವನ್ನು ಸಿಬಿಐಗೆ ಕೊಡಿಸುವ ಪ್ರಯತ್ನದ ಹೋರಾಟ ಮುಂದುವರೆಸಿಕೊಂಡು ಹೋಗುತ್ತೇವೆ. ಕೋರ್ಟ್ ಇಂದಿನ ತೀರ್ಪಿನಲ್ಲಿ ಯಾವ ಅಂಶಗಳನ್ನು ಪರಿಗಣಿಸಿ ನಮ್ಮ ಅರ್ಜಿ ತಿರಸ್ಕಾರ ಮಾಡಿದೆ ಹಾಗೂ ಆ ಅಂಶಗಳಿಗೆ ಯಾವ ರೀತಿ ಪೂರಕ ದಾಖಲೆಗಳನ್ನು ನೀಡಬೇಕು ಎಂದು ನಮ್ಮ ವಕೀಲರ ಜತೆ ಚರ್ಚಿಸಿ, ನಂತರ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಅಂಗಳಕ್ಕೆ ಹೋಗುತ್ತೇವೆ ಎಂದು ತಿಳಿಸಿದರು.










