ಆರ್​ಆರ್​ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ!

49
firstsuddi

ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಆರ್​ಆರ್​ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಂದಿದೆ.

ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಗೀತೆ, ವಿಶ್ವಮಟ್ಟದಲ್ಲೇ ಪ್ರಖ್ಯಾತಿ ಗಳಿಸಿದೆ. ಜಾಗತಿಕ ಗುಣಮಟ್ಟದ ಇಂಗ್ಲಿಷ್ ಹಾಡುಗಳನ್ನೂ ಹಿಂದಿಕ್ಕಿ ನಾಟು ನಾಟು ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ. ಕಾರ್ಯಕ್ರಮದಲ್ಲಿ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಪ್ರಶಸ್ತಿ ಪಡೆದುಕೊಂಡರು.

ಅಮೆರಿಕದ ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಜಗತ್ತಿನ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿದ್ದಾರೆ. ಭಾರತದಿಂದ ಒಂದು ಸಿನಿಮಾ ಮತ್ತು ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿಯ ಕಣದಲ್ಲಿದ್ದವು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿರುವುದು ಹೆಮ್ಮೆ ತಂದಿದೆ.

‘ಆರ್​ಆರ್​ಆರ್’ ಚಿತ್ರದ ‘ನಾಟು ನಾಟು..’ ಹಾಡು ರಿಲೀಸ್ ಆದ ನಂತರ ಧೂಳೆಬ್ಬಿಸಿತ್ತು. ಈ ಹಾಡಿನಲ್ಲಿ ರಾಮ್ ಚರಣ್ ಹಾಗೂ ಜ್ಯೂ.ಎನ್ ಟಿಆರ್ ಅವರ ಸ್ಟೆಪ್ ನೋಡಿ ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಈಗ ಈ ಹಾಡು ಪ್ರತಿಷ್ಠಿತ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ.