ತಿರುವನಂತಪುರಂ : ರಷ್ಯಾ-ಉಕ್ರೇನ್ ಸಂಘರ್ಷದಿಂದ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿ ತವರಿಗೆ ಮರಳಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಿಂದ ವಂಚಿತರಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶವನ್ನು ನೀಡಲಾಗುವುದು ಎಂದು ನವದೆಹಲಿಯಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥ ರೋಮನ್ ಬಾಬುಶ್ಕಿನ್ ಅವರು ಹೇಳಿದರು.
ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಇನ್ನೂ ಮುಗಿದಿಲ್ಲ. ಇದರಿಂದ ಉಕ್ರೇನ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದ ಭಾರತದ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದ ಕುರಿತ ಮಾಧ್ಯಮದವರ ಪ್ರಶ್ನೆಗೆ ರೋಮನ್ ಬಾಬುಶ್ಕಿನ್ ಅವರು ಈ ಹೇಳಿಕೆ ಕೊಟ್ಟಿದ್ದಾರೆ.
ಇದೇ ವೇಳೆ ರಷ್ಯಾದ ಒಕ್ಕೂಟದ ಗೌರವ ರಾಯಭಾರಿ ಮತ್ತು ತಿರುವನಂತಪುರಂನಲ್ಲಿರುವ ರಷ್ಯನ್ ಹೌಸ್ ನ ನಿರ್ದೇಶಕ ರತೀಶ್ ಸಿ.ನಾಯರ್ ಮಾತನಾಡಿ, ಉಕ್ರೇನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಹೊಂದಿದ್ದರೆ, ಅದನ್ನು ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಪಡೆಯಲು ಸಾಧ್ಯತೆಯಿದೆ ಎಂದು ತಿಳಿಸಿದರು. ಆದರೂ ಉಕ್ರೇನ್ ನಲ್ಲಿ ಪಾವತಿಸುವ ಶುಲ್ಕವು ರಷ್ಯಾದಲ್ಲಿ ಸಾಕಾಗುವುದಿಲ್ಲ ಎಂದು ಅವರು ಸುಳಿವು ನೀಡಿದರು. ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳು ಮತ್ತು ಇತರ ಶೈಕ್ಷಣಿಕ ದಾಖಲೆಗಳೊಂದಿಗೆ ತಿರುವನಂತಪುರಂನಲ್ಲಿರುವ ರಷ್ಯನ್ ಹೌಸ್ ಅನ್ನು ಸಂಪರ್ಕಿಸಬಹುದು. ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಸಂಪರ್ಕ ಸಾಧಿಸುವ ರಷ್ಯಾದ ವಿಶ್ವವಿದ್ಯಾಲಯಗಳಿಗೆ ಅದನ್ನು ರವಾನಿಸಲಾಗುವುದು ಎಂದು ಹೇಳಿದ್ದಾರೆ.










