ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಅಗ್ನಿ ದುರಂತ – ಒಂದೇ ಕುಟುಂಬದ 6 ಮಂದಿ ಸಜೀವ ದಹನ…

72
firstsuddi

ಲಕ್ನೋ : ಉತ್ತರ ಪ್ರದೇಶ ಫಿರೋಜಾಬಾದ್ ಜಿಲ್ಲೆಯ ಪಾಧಮ್ ಪಟ್ಟಣದಲ್ಲಿ ನಿನ್ನೆ ರಾತ್ರಿ ಅಗ್ನಿ ದುರಂತ ಸಂಭವಿಸಿದ್ದು, ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಮೃತಪಟ್ಟಿದ್ದಾರೆ.

ಇನ್ವರ್ಟರ್ ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಬೆಂಕಿ ಶೀಘ್ರದಲ್ಲೇ ಕುಟುಂಬ ವಾಸಿಸುತ್ತಿದ್ದ ಮಹಡಿಗೆ ವ್ಯಾಪಿಸಿತು. ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ನಾಲ್ವರು ಮಕ್ಕಳೂ ಪ್ರಾಣ ಕಳೆದುಕೊಂಡಿದ್ದಾರೆ. 18 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ಮಾಡಿತು ಎಂದು ಫಿರೋಜಾಬಾದ್ ನ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ತಿವಾರಿ ಹೇಳಿದ್ದಾರೆ.

ಘಟನೆಯಲ್ಲಿ ಒಂದೇ ಕುಟುಂಬದ 9 ಮಂದಿಗೆ ಸುಟ್ಟ ಗಾಯಗಳಾಗಿದ್ದವು. ಆದ್ರೆ ಈ ಪೈಕಿ ಆರು ಮಂದಿ ಸಾವನ್ನಪ್ಪಿದ್ದು, ಮೂವರನ್ನು ರಕ್ಷಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆಶಿಶ್ ತಿವಾರಿ ಮಾಹಿತಿ ನೀಡಿದರು.

ಕಾರ್ಖಾನೆಯಲ್ಲಿನ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂಬ ಅನುಮಾನವಿದ್ದು, ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಗ್ನಿ ಅವಘಡದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.