ಉದ್ಯಮಿ ಕೊಲೆ ಪ್ರಕರಣ ; ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ಎಂಟು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ…

80
firstsuddi

ಬೆಳಗಾವಿ : ಉದ್ಯಮಿ ಆರ್.ಎನ್.ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿದಂತೆ ಎಂಟು ಅಪರಾಧಿಗಳಿಗೆ ಇಲ್ಲಿನ ಕೋಕಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮಾರ್ಚ್ 30ರಂದು ಈ ಪ್ರಕರಣದಲ್ಲಿ 9 ಮಂದಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು.

ಪ್ರಕರಣದ ಎರಡನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಮೂರನೇ ಆರೋಪಿ ಬೆಂಗಳೂರಿನ ಅಭಿ ಭಂಡಗಾರ, ನಾಲ್ಕನೇ ಆರೋಪಿ ಉಡುಪಿಯ ಗಣೇಶ ಭಜಂತ್ರಿ,‌ಏಳನೇ ಆರೋಪಿ ಹಾಸನದ ಮಹೇಶ ಅಚ್ಛಂಗಿ, ಎಂಟನೇ ಆರೋಪಿ ಕೇರಳದ ಸಂತೋಷ ಎಂ.ಬಿ., ಒಂಬತ್ತನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾ, ಹತ್ತನೇ ಆರೋಪಿ ಬೆಂಗಳೂರಿನ ಜಗದೀಶ್ ಚಂದ್ರರಾಜ್, 12ನೇ ಆರೋಪಿ ಉತ್ತರ ಪ್ರದೇಶದ ಅಂಕಿತಕುಮಾರ್ ಕಶ್ಯಪ್‌ಗೆ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು. ಪ್ರಕರಣದ‌ ಐದನೇ ‌ಆರೋಪಿ ಕೇರಳದ‌ ಕೆ.ಎಂ‌.‌ಇಸ್ಮಾಯಿಲ್​ಗೆ ಮೂರು ಸೆಕ್ಷನ್ ಅಡಿ ಪ್ರತ್ಯೇಕವಾಗಿ 13 ವರ್ಷಗಳ ಕಾರಾಗೃಹ ಶಿಕ್ಷೆ ಜೊತೆಗೆ 15 ಸಾವಿರ ರೂ ದಂಡ ವಿಧಿಸಲಾಗಿದೆ. 

ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಆರೋಪಿಗಳಿಗೂ ದಂಡ ವಿಧಿಸಲಾಗಿದೆ. ಆರ್.ಎನ್.ನಾಯಕ ಅವರ ಪತ್ನಿಗೆ 30 ಲಕ್ಷ ರೂ ಪರಿಹಾರ ಒದಗಿಸಬೇಕು.‌ ಪುತ್ರ ಹಾಗೂ ಸಾಕ್ಷಿ ಹೇಳಿದ ಮೈಸೂರು ಮೂಲದ‌ ಮಹಿಳೆಗೆ ಪೊಲೀಸ್ ‌ಭದ್ರತೆ ಒದಗಿಸಬೇಕು ಎಂದು ಉತ್ತರ ‌ಕನ್ನಡ ಎಸ್.ಪಿ ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ‌ನಿರ್ದೇಶನ ನೀಡಿದೆ.

2013 ಡಿಸೆಂಬರ್ 21ರಂದು ಅಂಕೋಲಾದಲ್ಲಿ ಆರ್.ಎನ್. ನಾಯಕ ಕೊಲೆಯಾಗಿತ್ತು. 3 ಕೋಟಿ ರೂಪಾಯಿ ಹಫ್ತಾ ನೀಡದಿದ್ದಕ್ಕೆ ಆರ್.ಎನ್.ನಾಯಕ್ ಅವರನ್ನು ಸುಪಾರಿ ನೀಡಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬನ್ನಂಜೆ ರಾಜಾ ವಿರುದ್ಧ ಕೋಕಾ ಕಾಯ್ದೆಯಡಿ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಪ್ರಕರಣ ದಾಖಲಿಸಿದ್ದರು. 2015ರ ಫೆಬ್ರವರಿ 12 ರಂದು ಮೊರಕ್ಕೊದಲ್ಲಿ ಬನ್ನಂಜೆ ರಾಜಾ ಬಂಧನವಾಗಿತ್ತು. ಬಳಿಕ 2015ರ ಆಗಸ್ಟ್ 14ರಂದು ಭಾರತಕ್ಕೆ ಬನ್ನಂಜೆ ರಾಜಾ ಕರೆತರಲಾಗಿತ್ತು. 9 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಕೋಕಾ ವಿಶೇಷ ನ್ಯಾಯಾಲಯ ಇಂದು ಅಂತಿಮ ತೀರ್ಪು ಪ್ರಕಟಿಸಿದೆ.