ರಾಯಚೂರು : ಉಪಚುನಾವಣೆಯ ಬಳಿಕ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ವೀಕ್ ಚೀಫ್ ಮಿನಿಸ್ಟರ್, ಯಡಿಯೂರಪ್ಪ ಅವರಿಗೆ ಸ್ವಪಕ್ಷದವರೇ ತುಂಬಾ ತೊಂದರೆ ಕೊಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಅಮಿತ್ ಶಾ ಹಾಗೂ ಮೋದಿ ಬಳಿ ಮಾತನಾಡುವ ಶಕ್ತಿ ಇಲ್ಲ. ನೆರೆ ಪರಿಹಾರವನ್ನು ಕೇಂದ್ರದಲ್ಲಿ ಕೇಳಲು ಧೈರ್ಯವಿಲ್ಲ. ಬಿಜೆಪಿಗೆ 103 ಸೀಟ್ಗಳು ಇವೆ. ಹೀಗಾಗಿ ಉಪಚುನಾವಣೆಯ ಬಳಿಕ ಬಿಜೆಪಿ ಸರ್ಕಾರ ಪತನವಾಗುತ್ತದೆ. ನಮ್ಮ ಶಾಸಕರಿಗೆ ಹಣದ ಆಮಿಷವನ್ನು ತೋರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಮುಂದೆ ಮಧ್ಯಂತರ ಚುನಾವಣೆ ಬರುತ್ತದೆ ಆದರೆ ಬಿಜೆಪಿ ಹಾಗೂ ಜೆಡಿಎಸ್ ಜೊತೆ ಕೈಜೋಡಿಸುವುದಿಲ್ಲ. ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಯಾವುದೂ ಇಲ್ಲ. ಬಿ.ಎಸ್. ಯಡಿಯೂರಪ್ಪ ಅವರು ನೆರೆ ಸಂತ್ರಸ್ಥರಿಗೆ ಪರಿಹಾರ ಇವತ್ತೂ ಸಿಗುತ್ತೆ ನಾಳೆ ಸಿಗುತ್ತೇ ಎಂದು ಹೇಳುತ್ತಿದ್ದಾರೆ. ಇಷ್ಟೂ ದಿನ ಕಳೆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಯಡಿಯೂರಪ್ಪ ಅವರು ರಾಜ್ಯದ ಎಲ್ಲಾ ಕಡೆ ಬಿಜೆಪಿ ಶಾಸಕರಿದ್ದಾರೆ ಅಂದುಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಗೆಲ್ಲುವುದಿಲ್ಲ. ಹೀಗಾಗಿ ಮಧ್ಯಂತರ ಚುನಾವಣೆ ಬರುತ್ತದೆ ಎಂದರು.










