ಊಟ ರುಚಿ ಇಲ್ಲವೆಂದು ಹೆತ್ತತಾಯಿಯನ್ನೇ ಕೊಂದ ಪಾಪಿ ಮಗ…

93
firstsuddi

ಮುಂಬೈ: ಊಟ ರುಚಿ ಇಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಕೊಂದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವೇಲು ಗ್ರಾಮದಲ್ಲಿ ಭಾನುವಾರ ಸಂಜೆ ಕೊಲೆ ನಡೆದಿದೆ. ಅಡುಗೆ ರುಚಿಯಾಗಿ ಮಾಡಿಲ್ಲ ಎಂದು 55 ವರ್ಷದ ತಾಯಿಯನ್ನು ಮಗ ಕೊಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ನಿನ್ನೆ ಪ್ರಕರಣ ದಾಖಲಿಸಲಾಗಿದೆ.

ಮನೆ, ಅಡುಗೆ ವಿಚಾರಕ್ಕೆ ಆಗಾಗ ತಾಯಿ ಮಗನ ಮಧ್ಯೆ ಜಗಳ ನಡೆಯುತ್ತಿತ್ತು. ಭಾನುವಾರ ರಾತ್ರಿ ಮನೆಗೆ ಬಂದ ಮಗನಿಗೆ ತಾಯಿ ಊಟ ಬಡಿಸಿದ್ದಾಳೆ. ಊಟ ರುಚಿಯಾಗಿಲ್ಲ ಎಂದು ಆತ ತಾಯಿ ಜತೆ ಜಗಳ ಆಡಿದ್ದಾನೆ. ಕೋಪದ ಭರದಲ್ಲಿ ಆ ವ್ಯಕ್ತಿ ತನ್ನ ತಾಯಿಯ ಕುತ್ತಿಗೆಯ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ, ನಂತರ ತಾಯಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ಮೇಲೆ ಮಗ ಹಲ್ಲೆ ನಡೆಸುತ್ತಿರುವ ಕುರಿತು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಮತ್ತೊಂದೆಡೆ, ತಾಯಿಯನ್ನು ಹತ್ಯೆಗೈದ ವ್ಯಕ್ತಿಯು ನಿದ್ರೆ ಮಾತ್ರೆಗಳನ್ನು ನುಂಗಿದ್ದಾನೆ. ಅಸ್ವಸ್ಥಗೊಂಡಿರುವ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಗುಣಮುಖನಾದ ಮೇಲೆ ಪೊಲೀಸರು ಬಂಧಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.