ಲಕ್ನೋ : ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟಿರುವ ಘಟನೆ ನಿನ್ನೆ ನಡೆದಿತ್ತು. ಲಖಿಂಪುರ್ ಖೇರಿಗೆ ತೆರಳುತ್ತಿದ್ದ ಪ್ರಿಯಾಂಕಾ ಅವರನ್ನು ಸೀತಾಪುರದ ಹರಗಾಂವ್ ಬಳಿ ಪೊಲೀಸರು ಇಂದು ಮುಂಜಾನೆ ವಶಕ್ಕೆ ಪಡೆದಿದ್ದಾರೆ.
ಈ ಹಿಂಸಾಚಾರ ಘಟನೆಯಲ್ಲಿ ಮೃತಪಟ್ಟ ನಾಲ್ಕು ರೈತರ ಕುಟುಂಬಗಳನ್ನು ಪ್ರಿಯಾಂಕ ಗಾಂಧಿ ಅವರು ಭೇಟಿ ಮಾಡಿದರು. ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸೀತಾಪುರ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ ಎಂದು ಕಾಂಗ್ರೆಸ್ ತನ್ನ ಟ್ವಿಟ್ಟರ್ ನಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ತಿಳಿಸಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿಗೆ ಉಪ ಮುಖ್ಯಮಂತ್ರಿ ಕೇಶವ್ಪ್ರಸಾದ್ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿ ನೀಡುವ ವೇಳೆ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬೆಂಗಾವಲು ವಾಹನಗಳ ಸಾಲಿನಲ್ಲಿ ಬರುತ್ತಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾನ ಪುತ್ರ ಇದ್ದ ಕಾರು ರೈತರ ಮೇಲೆ ಹರಿದು ನಾಲ್ವರು ರೈತರು ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಪರಿಣಾಮ ಹೋರಾಟಗಾರರು ಬಿಜೆಪಿ ಕಾರ್ಯಕರ್ತರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಉರುಳಿಸಿದರು. ಈ ವೇಳೆ ನಾಲ್ವರು ರೈತರು ಸೇರಿದಂತೆ ಒಟ್ಟು 8 ಮಂದಿ ಸಾವನ್ನಪ್ಪಿದ್ದರು.










