ನವದೆಹಲಿ : ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಅದರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ಮಾಡಿದ್ದ ಆರೋಪಗಳಿಗೆ ಸುಪ್ರೀಂಕೋರ್ಟ್ ಇಂದು ತಡೆ ನೀಡಿದೆ.
ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠ, ಆರೋಪಿಯ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಅಪ್ರಸ್ತುತ ಅವಲೋಕನಗಳನ್ನು ಮಾಡಿದ್ದಾರೆ ಮತ್ತು ಜಾಮೀನು ಅರ್ಜಿಯ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಹೇಳಿದೆ.
ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಹೈಕೋರ್ಟ್ ಪೀಠ ನೀಡಿರುವ ಪ್ರತಿಕೂಲ ಹೇಳಿಕೆಗಳನ್ನು ಅನೂರ್ಜಿತಗೊಳಿಸುವಂತೆ ಪೀಠಕ್ಕೆ ಮನವಿ ಮಾಡಿದರು. ಇನ್ನೂ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿ, ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತೀವ್ರ ಟೀಕಾ ಪ್ರಹಾರ ಎದುರಿಸಿದ್ದ ಐಎಎಸ್ ಆಧಿಕಾರಿ ಜೆ. ಮಂಜುನಾಥ್ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್. ನಾಗಮುತ್ತು, ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಬದಲು ಬೇರೊಂದು ನ್ಯಾಯಪೀಠಕ್ಕೆ ವರ್ಗಾವಣೆ ಮಾಡುವಂತೆ ಕೋರಿದ್ದರು. ಇದಕ್ಕೆ ಅಸಮ್ಮತಿಸಿದ ನ್ಯಾಯಪೀಠ ವಿಚಾರಣೆಯನ್ನು ನ್ಯಾಯಾಧೀಶರೇ ಮುಂದುವರಿಸುತ್ತಾರೆ. ಆದರೆ ಪ್ರಕರಣಕ್ಕೆ ಸಂಬಂಧಪಡದ ವಿಚಾರಗಳಿಗೆ ನಾವು ತಡೆ ನೀಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿತು.
ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಮತ್ತು ಭಾರತೀಯ ಆಡಳಿತ ಸೇವೆಗಳ ಅಧಿಕಾರಿ ಜೆ ಮಂಜುನಾಥ್ ಅವರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್ಪಿ ಸಂದೇಶ್ ಅವರ ಲಂಚ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮಾಡಿದ ಪ್ರತಿಕೂಲ ಹೇಳಿಕೆಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಕಲಾಪಕ್ಕೆ ತಡೆ ನೀಡುವಂತೆ ಕೋರಿದ್ದರು.










