ಬೀಜಿಂಗ್: ಚೀನಾದ ಹ್ಯಾಂಗ್‌ಝೌನಲ್ಲಿ ಇಂದು ನಡೆದ ಏಷ್ಯನ್ ಗೇಮ್ಸ್‌ನ ಮಹಿಳೆಯರ 25 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಭಾರತ ಒಟ್ಟು 1759 ಅಂಕಗಳನ್ನು ಗಳಿಸಿದ್ದು, 1756 ಅಂಕಗಳೊಂದಿಗೆ ಚೀನಾ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ಕೊರಿಯಾ ದೇಶ 1742 ಅಂಕಗಳೊಂದಿಗೆ ಕಂಚಿನ ಪದಕವನ್ನು ಪಡೆದುಕೊಂಡಿದೆ.
ಅರ್ಹತಾ ಸುತ್ತಿನಲ್ಲಿ ಮನು 590 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದಿದ್ದು, ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇಶಾ ಸಿಂಗ್ ಕೂಡಾ 586 ಅಂಕಗಳೊಂದಿಗೆ 5ನೇ ಸ್ಥಾನವನ್ನು ಗಳಿಸಿದ್ದಾರೆ. ರಿದಮ್ 583 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ನಡೆದ ಮಹಿಳಾ 50 ಮೀಟರ್ ರೈಫಲ್ಸ್‌ನಲ್ಲಿ ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.










