ನವದೆಹಲಿ: ನಿನ್ನೆ ಸಂಜೆ ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ 233ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 900 ಜನರು ಗಾಯಗೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿನ ಅತ್ಯಂತ ಮಾರಣಾಂತಿಕ ಅಪಘಾತಗಳಲ್ಲಿ ಒಂದಾದ ಈ ಅಪಘಾತದಲ್ಲಿ ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ.
ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸಮೀಪದ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೂರು ಎನ್ಡಿಆರ್ಎಫ್ ಘಟಕಗಳು, 4 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳು, 15ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು, 30 ವೈದ್ಯರು, 200 ಪೊಲೀಸ್ ಸಿಬ್ಬಂದಿ ಮತ್ತು 60 ಆಂಬ್ಯುಲೆನ್ಸ್ಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ತಿಳಿಸಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ವಾಯುಪಡೆಯನ್ನು ಕರೆಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನನ್ನ ಪ್ರಾರ್ಥನೆಗಳು ಮತ್ತು ದುಃಖತಪ್ತ ಕುಟುಂಬಗಳಿಗೆ ಸಂತಾಪ. ಭುವನೇಶ್ವರ ಮತ್ತು ಕೋಲ್ಕತ್ತಾದಿಂದ ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಎನ್ಡಿಆರ್ಎಫ್, ರಾಜ್ಯ ಸರ್ಕಾರದ ರಕ್ಷಣಾ ತಂಡಗಳು ಮತ್ತು ವಾಯುಪಡೆ ಕೂಡ ಸಜ್ಜುಗೊಂಡಿದೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರಿಗೆ 10 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 50,000 ಪರಿಹಾರ ನೀಡುವುದಾಗಿ ವೈಷ್ಣವ್ ಘೋಷಿಸಿದ್ದಾರೆ.
ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲಿನಲ್ಲಿದ್ದ ಕರ್ನಾಟಕದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕರ್ನಾಟಕದಿಂದ ಹೋಗಿರುವ ರೈಲಿಗೂ ಸಹ ಹಾನಿಯಾಗಿದೆ. 23 ರೈಲ್ವೆ ಬೋಗಿಗಳ ಪೈಕಿ 3 ಬೋಗಿಗೆ ಮಾತ್ರ ಹಾನಿಯಾಗಿದೆ. ಹಾನಿಯಾದ ಬೋಗಿಯಲ್ಲಿ ಕರ್ನಾಟಕದವರು ಇದ್ದ ಮಾಹಿತಿ ಇಲ್ಲ. ನಿನ್ನೆಯಿಂದಲೂ ರೈಲ್ವೆ ಇಲಾಖೆ ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ತಿಳಿಸಿದ್ದಾರೆ.










