ಓಮಿಕ್ರಾನ್ ಭೀತಿ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ.. ವಿವರ ಇಂತಿದೆ…

36
firstsuddi

ಬೆಂಗಳೂರು : ರಾಜ್ಯದಲ್ಲಿ ಓಮಿಕ್ರಾನ್ ಪತ್ತೆ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಮುಂಜಾಗ್ರತಾ ಕ್ರಮವಾಗಿ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಶಾಲಾ, ಕಾಲೇಜುಗಳಿಗೆ ಹಾಜರಾಗುವ ಮಕ್ಕಳ ಪೋಷಕರು ಎರಡು ಡೋಸ್ ಕಡ್ಡಾಯ ಪಡೆದಿರಬೇಕು. ಇಲ್ಲದಿದ್ದರೆ ಮಕ್ಕಳು ಶಾಲೆಗೆ ಬರುವಂತಿಲ್ಲ. ಮಾಲ್, ಸಿನಿಮಾಗೂ ಎರಡು ಡೋಸ್ ಕಡ್ಡಾಯ. ಮದುವೆ ಸಮಾರಂಭಗಳಿಗೆ 500 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. 2022 ರ ಜನವರಿ 15 ವರೆಗೂ ಶಾಲಾ ಕಾಲೇಜುಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದರು.

ರಾಜ್ಯದಲ್ಲಿ 2ನೇ ಅಲೆ ವೇಳೆ ಸಿದ್ಧಗೊಂಡಿದ್ದ ಕೊವಿಡ್ ಬೆಡ್, ಐಸಿಯು ಬೆಡ್ ಗಳನ್ನು ಮತ್ತೆ ಸಿದ್ಧಪಡಿಸಲು ಸೂಚಿಸಲಾಗಿದೆ. ರಾಜ್ಯದಲ್ಲಿ ಮತ್ತೆ ಕಂಟ್ರೋಲ್ ರೂಂ ಆರಂಭಿಸಲಾಗುವುದು. ಅಗತ್ಯ ಔಷಧಿಗಳನ್ನು ಮುಂಚಿತವಾಗಿಯೇ ಖರೀದಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಕೊವಿಡ್ ಉಸ್ತುವಾರಿಗಾಗಿ ಶಿಲ್ಪಾ ನಾಗರಾಜ್ ಅವರನ್ನು ಸರ್ವೆಲೈನ್ಸ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದರು.

ಕೊವಿಡ್ ಟೆಸ್ಟ್ ಗೆ 500 ರೂ. ಹಾಗೂ ವಿಮಾನ ನಿಲ್ದಾಣದಲ್ಲಿ ಮಾಡುವ ಅಬೇಟ್ ಪರೀಕ್ಷೆಗೆ 3000 ದರ ನಿಗದಿ ಮಾಡಲಾಗಿದೆ. ಮೊದಲೇ ಸಮಯದ ವೇಳಾಪಟ್ಟಿ ನಿಗದಿ ಮಾಡಿರುತ್ತೇವೆ. ಏರ್ ಪೋರ್ಟ್ ನಲ್ಲಿಯೂ ಕಟ್ಟುನಿಟ್ಟಾಗಿ ಕೊವಿಡ್ ಟೆಸ್ಟ್ ನಡೆಸಲಾಗುವುದು. ನೆಗೆಟಿವ್ ವರದಿ ಬಂದ ನಂತರ ಏರ್‌ಪೋರ್ಟ್‌ನಿಂದ ಹೊರಕ್ಕೆ ಕಳಿಸಲಾಗುವುದು. ಬೆಳಗಾವಿ ಅಧಿವೇಶನ ನೀತಿ ನಿಯಮದಂತೆ ನಡೆಸುತ್ತೇವೆ ಎಂದು ಕಂದಾಯ ಸಚಿವರು ತಿಳಿಸಿದರು.