ಕಮರಿಗೆ ಬಿದ್ದ ಸೇನಾ ವಾಹನ – 16 ಯೋಧರು ಸಾವು…

79
firstsuddi

ಗ್ಯಾಂಗ್ಟಾಕ್ : ಸೇನಾ ವಾಹನವೊಂದು ಕಮರಿಗೆ ಬಿದ್ದು 16 ಮಂದಿ ಯೋಧರು ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿರುವ ಘಟನೆ ಉತ್ತರ ಸಿಕ್ಕಿಂನ ಝೆಮಾ ಎಂಬಲ್ಲಿ ನಡೆದಿದೆ.

ಸೇನಾ ವಾಹನವು ಬೆಳಗ್ಗೆ ಚಾಟೆನ್‌ ನಿಂದ ಥಾಂಗು ಕಡೆಗೆ ಹೊರಟಿತ್ತು. ಝೆಮಾದಲ್ಲಿ ಸಾಗುತ್ತಿದ್ದಾಗ ವಾಹನವು ತೀಕ್ಷ್ಣವಾದ ತಿರುವಿನಲ್ಲಿ ಆಯತಪ್ಪಿ ಕಣಿವೆಗೆ ಉರುಳಿದೆ ಎಂದು ಸೇನೆ ಹೇಳಿದೆ. ಗಾಯಾಳುಗಳನ್ನು ಉತ್ತರ ಬಂಗಾಳದ ಸೇನಾಸ್ಪತ್ರೆಗೆ ವಿಮಾನದ ಮೂಲಕ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಸ್ಥಳದಿಂದ ಎಲ್ಲಾ 16 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರು ಸೇನಾ ಸಿಬ್ಬಂದಿಗಳ ಸ್ಥಿತಿಗತಿ ಬಗ್ಗೆ ಇನ್ನೂ ತಿಳಿದುಬಂದಿಲ್ಲ.

ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೈನಿಕರ ಬದ್ಧತೆಗೆ ದೇಶವೇ ಕೃತಜ್ಞವಾಗಿದೆ. ಅವರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.