ಕರ್ನಾಟಕದಲ್ಲಿ ಬಿಜೆಪಿ ಗೆಲುವು ಖಚಿತ : ಅಮಿತ್ ಶಾ.

44
firstsuddi

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪೂರ್ಣ ಬಹುಮತದಿಂದ ಗೆಲುವು ಸಾಧಿಸಲಿದೆ. ಅದರೊಂದಿಗೆ ಮಧ್ಯಪ್ರದೇಶ, ತ್ರಿಪುರಾ, ರಾಜಸ್ಥಾನ ಛತ್ತೀಸ್ ಗಢದಲ್ಲೂ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ 2 ತಿಂಗಳಲ್ಲಿ ನಾನು ಕರ್ನಾಟಕಕ್ಕೆ 5 ಬಾರಿ ಭೇಟಿ ನೀಡಿದ್ದೇನೆ. ಈ ರಾಜ್ಯದ ಜನರ ನಾಡಿಯನ್ನು ಅರಿತುಕೊಂಡಿದ್ದೇನೆ. ಪ್ರಧಾನಿ ಮೋದಿ ಅವರ ಜನಪ್ರಿಯತೆ ಎಷ್ಟಿದೆ ಎಂದು ಬಲ್ಲೆ. ಕರ್ನಾಟಕದಲ್ಲಿ ಬಿಜೆಪಿಗೆ ಭಾರೀ ಜನಾದೇಶ ಸಿಗುತ್ತದೆ. ಮಂಡ್ಯದ ಜನರೂ ವಂಶಾಡಳಿತದ ಪಕ್ಷಗಳಿಂದ ದೂರವಾಗಿ ಬಿಜೆಪಿಯ ಅಭಿವೃದ್ಧಿ ರಾಜಕೀಯವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕಕ್ಕೆ ಶುಭ ಸೂಚನೆ ಎಂದು ಹೇಳಿದ್ದಾರೆ.

ಅಮಿತ್ ಶಾ ಇದೇ ವೇಳೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಬುಡಕಟ್ಟು ಸಮುದಾಯದವರ ಮತಗಳು ಸಿಗಲಿವೆ ಎಂದಿದ್ದಾರೆ. ಬುಡಕಟ್ಟು ಸಮುದಾಯಗಳು ಈಗ ಅಭಿವೃದ್ಧಿ ಕಾಣತೊಡಗಿವೆ. ಇವತ್ತು ದೇಶಕ್ಕೆ ಬುಡಕಟ್ಟು ಸಮುದಾಯದಿಂದ ಮೊದಲ ಬಾರಿಗೆ ರಾಷ್ಟ್ರಪತಿ ಸಿಕ್ಕಿದ್ದಾರೆ. ಬಡ ಕುಟುಂಬಗಳಿಗೆ ಸರ್ಕಾರ ನೀಡುತ್ತಿರುವ ಬೆಂಬಲವು ಯಾವುದೇ ಭೇದವಿಲ್ಲದೇ ಬುಡಕಟ್ಟು ಸಮುದಾಯಕ್ಕೂ ಸಿಗುತ್ತಿದೆ. ಈ ಹಿಂದೆ ತಮ್ಮನ್ನು ವಂಚಿಸಲಾಗುತ್ತಿತ್ತು ಎಂಬುದು ಈ ಸಮುದಾಯಗಳಿಗೆ ಅರಿವಾಗುತ್ತಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.