ಬೆಂಗಳೂರು: ‘ದುಷ್ಟ ಶಕ್ತಿ ಎದುರು ಸತ್ಯದ ಜಯ. ಸರ್ಕಾರವನ್ನ ಅಸ್ಥಿರಗೊಳಿಸಲು ವಾಮಮಾರ್ಗ, ಮೋಸದಿಂದ ಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ನಿಗ್ರಹಿಸಲಿ.’ ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜಾಹೀರಾತು! ಇಂದು ಬೆಳ್ಳಂಬೆಳಗ್ಗೆಯೇ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲೇ ಮೊಳಗಿದ ಜಾಹೀರಾತಿದು. ದಸರಾ ಶುಭಾಶಯ ಕೋರುವ ಜಾಹೀರಾತು ನೆಪದಲ್ಲೇ ವಿರೋಧ ಪಕ್ಷಕ್ಕೆ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ. ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಪತ್ರಿಕಾ ಜಾಹೀರಾತು ಸಮರ ಓದುಗರ, ಸಾರ್ವಜನಿಕರ ಗಮನ ಸೆಳೆದಿತ್ತು. ಜತೆಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಕ್ರಿಯಾಶೀಲ ಟೀಕೆಗಳು, ವ್ಯಂಗ್ಯಚಿತ್ರಗಳನ್ನು ಪೋಸ್ಟ್ ಮಾಡಿ ಮತದಾರರನ್ನು ಓಲೈಸಲು ಯತ್ನಿಸಲಾಗಿತ್ತು. ಇದೀಗ ಮತ್ತೆ ದಸರಾ ಶುಭಾಶಯ ಹೇಳುವ ನೆಪದಲ್ಲಿ ಆಡಳಿತಾರೂಢ ಕಾಂಗ್ರೆಸ್ ಜಾಹೀರಾತು ಸಮರ ಸಾರಿದೆ. ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ, ಇದು ಸರ್ಕಾರದ ಅಸ್ಥಿರಗೊಳಿಸಲು ಬಿಜೆಪಿಯಿಂದ ಷಡ್ಯಂತ್ರ ಅಂತಾ ಆರೋಪಿಸುತ್ತಲೇ ಬಂದಿದ್ದಾರೆ. ಇದೀಗ ದಸರಾಗೆ ಶುಭಾಶಯ ಕೋರುವ ಸರ್ಕಾರದ ಜಾಹೀರಾತಿನ ಮೂಲಕ ಬಿಜೆಪಿ ಹಾಗೂ ಜೆಡಿಎಸ್ಗೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ. ವಾಮಮಾರ್ಗದಿಂದ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುವುದಿಲ್ಲ ಎಂದು ದೋಸ್ತಿ ನಾಯಕರಿಗೆ ಜಾಹೀರಾತು ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಂದು ತಿರುಗೇಟು ನೀಡಿದೆ. ಕಾಂಗ್ರೆಸ್ ಜಾಹೀರಾತಿನ ಬಗ್ಗೆ ಆಕ್ರೋಶ ಹೊರಹಾಕಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ರಾಜ್ಯವನ್ನು ಮೋಸದಿಂದ ಸ್ಥಿರಗೊಳಿಸಲು ಸರ್ಕಾರ ಹೊರಟಿದೆ. ಸ್ಥಿರಗೊಳಿಸುವುದು, ಅಸ್ಥಿರಗೊಳಿಸುವುದು ನಮ್ಮ ಕೈಯಲ್ಲಿ ಇಲ್ಲ, ಚಾಮುಂಡಿ ತಾಯಿ ಕೈಯಲ್ಲಿ ಇದೆ ಎಂದು ಕಿಡಿಕಾರಿದ್ದಾರೆ.










