ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಂ.ಬಿ ಪಾಟೀಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದ್ದು ಚುನಾವಣಾ ಕಣಕ್ಕೆ ಭರ್ಜರಿ ಸಿದ್ಧತೆ ನಡೆಸಿದೆ.
ಎಂ.ಬಿ ಪಾಟೀಲ್ ರಾಜಕೀಯದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದವರು. ಸತತ ಮೂರು ಬಾರಿ ವಿಜಯಪುರದ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿರುವ ಪಾಟೀಲ್ ಅವರಿಗೆ ಲೋಕಸಭೆ, ವಿಧಾನಸಭೆ ಹಾಗೂ ಸಚಿವ ಸ್ಥಾನದ ಜವಾಬ್ದಾರಿ ವಹಿಸಿರುವ ಅನುಭವವೂ ಇದೆ.










