ಕರ್ನಾಟಕ ರಾಜ್ಯಕ್ಕೆ 50 ವರ್ಷದ ಸಂಭ್ರಮ: ಎಲ್ಲಾ ಜಿಲ್ಲೆಗಳಲ್ಲಿ “ಹಲ್ಮಿಡಿ’ ಶಾಸನದ ಪ್ರತಿಕೃತಿ ಪ್ರತಿಷ್ಠಾಪನೆಗೆ ಸರ್ಕಾರ ಮುಂದು.

30

ಬೆಂಗಳೂರು: ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣಗೊಂಡು 50 ವರ್ಷ ಪೂರ್ಣಗೊಂಡಿದ್ದು. ಈ ನಡುವೆ ರಾಜ್ಯದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಕೂಡ ಜರುಗಲಿದೆ. ಈ ಕಾರ್ಯಕ್ರಮವನ್ನು ಸ್ಮರಣೀಯ ಕಾರ್ಯಕ್ರಮವನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದು, ಇದರಂತೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡದ ಮೊದಲ ಶಿಲಾ ಶಾಸನ ‘ಹಲ್ಮಿಡಿ ಶಾಸನ’ದ ಕಲ್ಲಿನ ಪ್ರತಿಕೃತಿ ರಚಿಸಿ, ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಷ್ಠಾಪಿಸಲು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಹಲ್ಮಿಡಿ ಶಾಸನದ ಪ್ರತಿಕೃತಿಗಳನ್ನು ರಚಿಸುವ ಜವಾಬ್ದಾರಿಯನ್ನು ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯಕ್ಕೆ ನೀಡಲಾಗಿದ್ದು, ಜಿಲ್ಲಾಡಳಿತದ ವತಿಯಿಂದ ಶಿಲಾಶಾಸನವನ್ನು ಪ್ರತಿಷ್ಠಾಪನೆ ಮಾಡಿ ನವೆಂಬರ್ 1 ರಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದ ಅನಾವರಣ ಮಾಡಿಸಲು ಸೂಚನೆ ನೀಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
ಹಲ್ಮಿಡಿ ಶಾಸನವನ್ನು ಕೆತ್ತಲು ಎಚ್‍ಡಿ ಕೋಟೆಯಿಂದ ಕಲ್ಲನ್ನು ತರಿಸಲಾಗಿದೆ ಹಾಗೂ ಈ ಶಿಲಾಶಾಸನವನ್ನು ಚಿಕ್ಕಮಗಳೂರಿನಲ್ಲಿ ಸಿದ್ದಪಡಿಸಲಾಗಿದೆ. ಹೀಗೆ ಸಿದ್ದವಾದ ಶಿಲಾ ಶಾಸನದ ಪ್ರತಿಕೃತಿಯನ್ನು ಎಲ್ಲ ಜಿಲ್ಲಾ ಕೇಂದ್ರಗಳಿಗೆ ಈಗಾಗಲೇ ಕಳುಹಿಸಲಾಗಿದ್ದು, ಪ್ರತಿಷ್ಠಾಪನೆ ನಡೆಸುವ ಸ್ಥಳಗಳಲ್ಲಿ ಕಲ್ಲಿನ ಪ್ರತಿಕೃತಿ ತಂದು ನಿಲ್ಲಿಸಲಾಗಿದೆ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ವಿಶ್ವಕರಾಮ ಆಚಾರ್ಯ ತಿಳಿಸಿದ್ದಾರೆ. ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಎಸ್.ಪಿ.ಜಯಣ್ಣಾಚಾರ್ ಅವರ ಮಾರ್ಗದರ್ಶನದಲ್ಲಿ ಮಹಾವಿದ್ಯಾಲಯದ 15 ಕಲಾವಿದರು ಹಾಗೂ ಮೈಸೂರು, ಗದಗ, ತುಮಕೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರಿನ ಇತರ 15 ಮಂದಿ ಕಲಾವಿದರು ಶಾಸನದ ಪ್ರತಿಕೃತಿ ಕೆತ್ತುವ ಕಾರ್ಯವನ್ನು ಮಾಡಿದ್ದಾರೆ. ಕಲಾವಿದರು 15 ದಿನಗಳಲ್ಲಿ ಕೆಲಸವನ್ನು ಪೂರ್ಣಗೊಳಿಸಿದ್ದಾರೆಂದು ಹೇಳಿದ್ದಾರೆ.