ಕರ್ನಾಟಕ ರಾಜ್ಯದಾದ್ಯಂತ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ. ರಾಜ್ಯದಾದ್ಯಂತ ಹರಡಿದ ಕನ್ನಡದ ಕಂಪು.

28

ಬೆಂಗಳೂರು: ಇಂದು ಕರ್ನಾಟಕ ರಾಜ್ಯದಾದ್ಯಂತ 69ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗಡಿ ನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ರಾಜ್ಯೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ-ಯುವತಿಯರ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ವೈಭವದ ರಾಜ್ಯೋತ್ಸವವನ್ನು ಆಚರಿಸಿದರು. ಈ ವೇಳೆ ಕೆಂಪು-ಹಳದಿ ಬಣ್ಣದ ಬಲೂನ್‍ಗಳ ಗುಚ್ಚವನ್ನು ಆಕಾಶಕ್ಕೆ ತೇಲಿ ಬಿಟ್ಟರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಐತಿಹಾಸಿ ಕಟ್ಟಡಗಳಿಗೆ ಕೆಂಪು ಹಳದಿ ದೀಪಲಂಕಾರ ಮಾಡಲಾಗಿದ್ದು, ವಿಧಾನಸೌಧ ಕಟ್ಟಡ ಕೆಂಪು ಹಾಗೂ ಹಳದಿ ಬಣ್ಣದ ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದೆ. ಕಟ್ಟಡದ ಸುತ್ತಲೂ ಕನ್ನಡದ ಬಾವುಟಗಳು ರಾರಾಜಿಸುತ್ತಿದೆ. ವಿಧಾನಸೌಧ ಅಷ್ಟೇ ಅಲ್ಲ, ಬಿಬಿಎಂಪಿ ಕಚೇರಿ ರೂಡ ಕೆಂಪು ಹಾಗೂ ಹಳದಿ ಬಣ್ಣ ಬೆಳಕಿನಲ್ಲಿ ಜಗಮಗಿಸುತ್ತಿದೆ. ಹೀಗೆ ಕರ್ನಾಟಕ ನಾಡಿನಾದ್ಯಂತ ಹಲವಾರು ರೀತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಷಯ ಕೋರಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಾಡಭಾಷೆ ಕನ್ನಡ ಆಡು ಭಾಷೆ, ಅನ್ನದ ಭಾಷೆಯಾಗಲಿ. ನಿತ್ಯ ಬದುಕಿನಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸೋಣ, ಆ ಮೂಲಕ ಕನ್ನಡವನ್ನು ಬೆಳೆಸೋಣ. “ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂದು ಹೇಳಿದ್ದಾರೆ.