ಕಳಸ : ನಿರಾಶ್ರಿತರು ಹಾಕಿಕೊಂಡಿದ್ದ ಗುಡಿಸಲುಗಳನ್ನು ಕಿತ್ತೆಸೆದ ಅರಣ್ಯ ಅಧಿಕಾರಿಗಳು…

241
firstsuddi

ಕಳಸ : ಮಾವಿನಕೆರೆ ಗ್ರಾಮ ಸರ್ವೆ ನಂ 85ರಲ್ಲಿ ನಿವೇಶನ ರಹಿತರು ನಿರ್ಮಿಸಿದ ಗುಡಿಸಲುಗಳನ್ನು ಅರಣ್ಯ ಇಲಾಖೆ ಇಂದು ತೆರವು ಮಾಡಿದರು.
ಕಳಸದ ಹಿನಾರಿ ಗುಡ್ಡದಲ್ಲಿ ಫೆ.9 ರಂದು ಸುಮಾರು 120ಕ್ಕೂ ಹೆಚ್ಚು ನಿರಾಶ್ರಿತರು ಗುಡ್ಡದಲ್ಲಿ ಟೆಂಟ್ ಹಾಕಿ ಕುಳಿತಿದ್ದರು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ತಕರಾರು ತೆಗೆದಿತ್ತು. ಆದರೆ ನಿವೇಶನ ರಹಿತರು ಇದು ಕಂದಾಯ ಭೂಮಿ ಇದರಲ್ಲಿ ನಮಗೆ ನಿವೇಶನ ಕೊಡಬೇಕು ಎಂದು ಒತ್ತಾಯಿಸಿತ್ತು. ಅಲ್ಲದೆ ಹಿನಾರಿ ಗುಡ್ಡದಿಂದ ಕಳಸ ನಾಡ ಕಚೇರಿಯವರೆಗೆ ಕಾಲ್ನಡಿಗೆ ಜಾಥ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು.
ಇಷ್ಟಾದರೂ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸಿರಲಿಲ್ಲ. ಮಂಗಳವಾರ ಇದೇ ಸ್ಥಳದಲ್ಲಿ ಸುಮಾರು 15 ಕುಟುಂಬಗಳು ಶೀಟ್ ಹಾಕಿ ಗುಡಿಸಲು ನಿರ್ಮಿಸಿ ಅದೇ ಸ್ಥಳದಲ್ಲಿ ವಾಸ ಮಾಡಲು ಪ್ರಾರಂಬಿಸಿದರು. ಇದನ್ನು ಅರಿತ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದು ತೆರವು ಮಾಡುವಂತೆ ಸೂಚಿಸಿತ್ತು. ಇಂದು ಕೂಡಾ ತೆರವು ಮಾಡದೆ ಇರುವ ಹಿನ್ನಲೆಯಲ್ಲಿ 15 ಗುಡಿಸಲುಗಳನ್ನು ಸೇರಿ 120ಕ್ಕೂ ಹೆಚ್ಚು ಟೆಂಟ್ ಗಳನ್ನು ಕಿತ್ತು ಹಾಕಿದರು.
ಇಲಾಖೆಯು ಗುಡಿಸಲು ತೆರವು ಮಾಡುವ ಸಂದರ್ಭದಲ್ಲಿ ನಿವೇಶನರಹಿತರು ಪ್ರತಿರೋದ ವ್ಯಕ್ತಪಡಿಸಿದರು. ನಾವು ಪ್ರಾಣ ಕೊಟ್ಟರೂ ಈ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಪೊಲೀಸರ ಸಮ್ಮುಖದಲ್ಲಿ ಅರಣ್ಯ ಇಲಾಖೆಯ 20ಕ್ಕೂ ಹೆಚ್ಚು ಸಿಬ್ಬಂದಿಗಳು ಎಲ್ಲಾ ಗುಡಿಸಲುಗಳನ್ನು ತೆರವು ಮಾಡಿದರು. ಹಾಕಿರುವ ಟೆಂಟ್ ಗಳನ್ನು ಇಲಾಖೆ ವಶಪಡಿಸಿಕೊಂಡಿತು.

ಬಡವರಿಗೊಂದು ಕಾನೂನು ಉಳ್ಳವರಿಗೊಂದು ಕಾನೂನು :

ನೂರಾರು ಎಕರೆ ತೋಟ ಮಾಡಿಕೊಂಡವರು ಮತ್ತಷ್ಟು ಒತ್ತುವರಿ ಮಾಡಿದರೆ ಅದಕ್ಕೆ ಸಾಥ್ ನೀಡುವ ಅರಣ್ಯ ಇಲಾಖೆ ಬಡವರು ನಿವೇಶನರಹಿತರು ತಲೆಗೊಂದು ಸೂರು ಕಟ್ಟಿಕೊಳ್ಳುವುದಕ್ಕೂ ಇಲಾಖೆ ಬಿಡುತ್ತಿಲ್ಲ. ಕೂಲಿ ಮಾಡಿ ಜೀವನ ಮಾಡುತ್ತಿರುವ ನಮ್ಮಂತವರ ನೆರವಿಗೆ ಯಾವ ಜನಪ್ರತಿನಿಧಿಗಳು ಬರೋದಿಲ್ಲ. ಉಳ್ಳವರ ಪರವಾಗಿರುವ ಇಲಾಖೆಯ ಅಧಿಕಾರಿಗಳು ಬಡವರ ಮೇಲೆ ದೌರ್ಜನ್ಯ ನಡೆಸಿ ಗುಡಿಸಲು ಕಿತ್ತು ಹಾಕಿದೆ. ಮಾನವೀಯತೆಯನ್ನು ತೋರಿಸದ ಇಲಾಖೆ ಶೀಟ್‍ಗಳಿಗೆ ಒದ್ದು ಪುಡಿ ಮಾಡಿದ್ದಾರೆ. ಇದೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ನಮ್ಮ ಬಳಿಯಿಂದ 15 ಸಾವಿರ ಲಂಚ ತೆಗೆದುಕೊಂಡು ಕುಡಿಯೋದಕ್ಕೆ ಎಣ್ಣೆ ತೆಗೆದುಕೊಂಡು ಈಗ ಅದೇ ಸಿಬ್ಬಂದಿಗಳು ಇವತ್ತು ಮುಖ ಮುಚ್ಚಿಕೊಂಡು ನಮ್ಮ ಗುಡಿಸಲು ಕೀಳುವುದಕ್ಕೆ ಬಂದಿದ್ದಾರೆ. ಇಂತಹ ಅಧಿಕಾರಿಗಳಿಗೆ ನಾಚಿಕೆ ಆಗಬೇಕು.ಇದನ್ನು ಇಲ್ಲಿಗೆ ಬಿಡುವುದಿಲ್ಲ ಇದೇ ಸ್ಥಳದಲ್ಲಿ ಮತ್ತೆ ನಾವು ಮನೆ ಮಾಡಿಕೊಳ್ಳುತ್ತೇವೆ ಎಂದು ನಿವೇಶನ ರಹಿತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸ್ಥಳದಲ್ಲಿ ನಿವೇಶನ ರಹಿತರಾದ ಸಂತೋಷ್, ರತ್ನ, ಗುಲಾಬಿ, ಸುಶೀಲ, ಸೌಮ್ಯ, ಆಶಾ ಇತರರು ಇದ್ದರು.