ಮೂಡಿಗೆರೆ : ಕಳಸ ಸಮೀಪದ ಹೊರನಾಡು ಗ್ರಾಮವನ್ನು ಬಲಿಗೆ ಗ್ರಾಮದೊಂದಿಗೆ ಬೆಸೆಯುವ ರಸ್ತೆ ಕಾಮಗಾರಿಯನ್ನು ಸ್ಥಗಿಸಿಗೊಳಿಸಿದ ಕಾರಣಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿನ ವರ್ಷದ ಮಾರ್ಚ್ ತಿಂಗಳಿನಲ್ಲಿ 6.78 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭವಾಗಿತ್ತು. ಕಾಮಗಾರಿಯಲ್ಲಿ ನಿಗದಿಪಡಿಸಲಾದ 6ಕಿ.ಮೀ ಪೈಕಿ ಕೇವಲ 3.5ಕಿ.ಮೀ ರಸ್ತೆ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ನಿಧಾನಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿಯ ಕೆಲಸ ನಿಂತು ಒಂದು ತಿಂಗಳು ಕಳೆದಿದೆ. ಈ ವಿಚಾರದ ಬಗ್ಗೆ ಸ್ಥಳೀಯ ಪ್ರಾಧಿಕಾರ ಹಾಗೂ ಅಧಿಕಾರಿಗಳನ್ನು ಸಂಪರ್ಕ ಮಾಡಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯ ಮಂಜು ಆರೋಪ ಮಾಡಿದ್ದಾರೆ.
ದೊಡ್ಡ ಮೊತ್ತದ ಗುತ್ತಿಗೆ ನೀಡಿದ್ದರೂ ಗುತ್ತಿಗೆದಾರ ರಸ್ತೆ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ನಡೆಸಿದ್ದಾನೆ ಎಂದು ಗ್ರಾಮಸ್ಥರಿಗೆ ಸಮಾಧಾನ ಇಲ್ಲ. ಜೆಲ್ಲಿಯನ್ನು ಕಾಟಾಚಾರಕ್ಕೆ ಚೆಲ್ಲಿ ಅದರ ಮೇಲೆ ತೆಳುವಾಗಿ ಡಾಂಬಾರು ಹಾಕಲಾಗಿದೆ. ಹೊಸ ರಸ್ತೆಯ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ರಸ್ತೆ ಕಿತ್ತು ಬಂದಿದೆ. ಅಲ್ಲದೆ ಹೊಸ ರಸ್ತೆ ನಿರ್ಮಾಣದ ನಂತರ ರಸ್ತೆ ಅಂಚಿನಲ್ಲಿ ಮಣ್ಣು ಸುರಿದಿಲ್ಲ ಎಂದು ಕುಂಬ್ರಿಹಕ್ಲು ಅರ್ಕ ಕೀರ್ತಿ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಮಾರ್ಚ್ 15 ರ ನಂತರ ಬಂದು ಇಲ್ಲಿ ಕೆಲಸ ಮಾಡುವುದಾಗಿ ಗುತ್ತಿಗೆದಾರರ ಕೆಲಸಗಾರರು ಇಲ್ಲಿದ್ದ ಸಲಕರಣೆಗಳನ್ನು ಕೊಂಡೊಯ್ದಿದ್ದಾರೆ. ಅವರುಗಳು ಪ್ರತಿಕ್ರಿಯಿಸಿದ ರೀತಿಯನ್ನು ಕಂಡರೆ ಸದ್ಯಕ್ಕೆ ಕೆಲಸ ಪೂರ್ಣಗೊಳಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಪ್ರತೀದಿನ ಇಲ್ಲಿನ ನೂರಾರು ಗ್ರಾಮಸ್ಥರು ಪಟ್ಟಣ ಪ್ರದೇಶವನ್ನು ತಲುಪಬೇಕಾದರೆ ಇದೇ ರಸ್ತೆ ಪ್ರಮುಖವಾಗಿದ್ದು, ಬಲಿಗೆ, ಚಿಕ್ಕನಕೂಡಿಗೆ ಗ್ರಾಮಗಳಿಗೆ ಇದೇ ರಾಜಮಾರ್ಗವಾಗಿದೆ. ಆದರೆ ಅರ್ಧ ಕಾಮಗಾರಿಯಿಂದಾಗಿ ರಸ್ತೆ ಬಳಸುವುದು ಅಸಾಧ್ಯವಾಗಿದೆ. ಇನ್ನು ಎರಡು ತಿಂಗಳಿನಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು, ಬಲಿಗೆ ಹೊರನಾಡು ರಸ್ತೆ ಕಾಮಗಾರಿ ನಿಲ್ಲಿಸಿರುವ ಕುರಿತು ದೂರುಗಳು ಬಂದಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಡನೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.










