ಕಳಸ : ಸಮರ್ಪಕ ರಸ್ತೆ ದುರಸ್ತಿಗೆ ಆಗ್ರಹಿಸಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಚಿಕ್ಕನಕುಡಿಗೆ, ದಂಟಗ, ತುರ, ಬಲಿಗೆ, ಕೆಸುವಿನ ಕೊಂಡ, ಕವನಹಳ್ಳ, ಮಣ್ಣಿನಪಾಲ್, ಹೊನ್ನೆಕಾಡು, ಮೆಣಸಿನಹಾಡ್ಯ ಗ್ರಾಮಸ್ಥರು ಬಹಿಷ್ಕಾರ ಮಾಡಿದ್ದಾರೆ.
ಈ ಬಗ್ಗೆ ಇಂದು ಮನವಿಯನ್ನು ಕಳಸ ನಾಡ ಕಛೇರಿ ಉಪತಹಶಿಲ್ದಾರ್ ವರಿಗೆ ನೀಡಿದ್ದು, ಮನವಿಯಲ್ಲಿ ಹೊರನಾಡಿನಿಂದ ಶೃಂಗೇರಿಗೆ ಬಲಿಗೆ-ಮೆಣಸಿನಹಾಡ್ಯ ಮುಖಾಂತರ ಹತ್ತಿರದ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊರನಾಡಿನಿಂದ ಪ್ರಾರಂಭಿಸಿ ಬಲಿಗೆ ವರೆಗಿನ 6.50 ಕಿ.ಮೀ ರಸ್ತೆ ದುರಸ್ಥಿಗೆ 2019ನೇ ಸಾಲಿನಲ್ಲಿ ರೂ 8.50ಕೋಟಿ ಅನುದಾನ ದೊರಕಿತ್ತು. ಈಗಾಗಲೇ 5 ಕಿ.ಮೀ ರಸ್ತೆಯನ್ನು ದುರಸ್ಥಿಗೊಳಿಸಲಾಗಿದೆ. ಆದರೆ ಹೊರನಾಡಿನ ಪ್ರಾರಂಭಿಕ ಹಂತದ ಅಂದಾಜು ಒಂದೂವರೆ ಕಿ.ಮೀ ರಸ್ತೆಯು ತೀರಾ ಇಕ್ಕಟ್ಟಾಗಿದ್ದು, ಈ ರಸ್ತೆಯನ್ನು ಅಗಲೀಕರಣಗೊಳಿಸದೆ ಕಾಮಗಾರಿಯನ್ನು ಮುಂದುವರೆಸಲಾಗಿದೆ. ಈ ಬಗ್ಗೆ ಕಳೆದ ವರ್ಷ ನಡೆದ ಜನಸಂಪರ್ಕ ಸಭೆಯಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿಯ ಬಗ್ಗೆ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ರಸ್ತೆಯನ್ನು ಅಗಲೀಕರಣಗೊಳಿಸುವ ಬಗ್ಗೆ ಬರವಸೆ ನೀಡಿದ್ದರೂ ಕೂಡ ಅದು ಕಾರ್ಯಗತವಾಗಿಲ್ಲ.
ಈ ಅಸಂಬದ್ದ ಕಾಮಗಾರಿಯನ್ನು ವಿರೋಧಿಸಿ, ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಈ ಭಾರಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡುತ್ತಿದ್ದೇವೆ. ಹತ್ತು ದಿನದಲ್ಲಿ ನಮ್ಮ ಬೇಡಿಕೆ ಈಡೇರದಿದಲ್ಲಿ ರಸ್ತೆ ತಡೆ ಮತ್ತು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಹಾಗೇಯೆ ಮಾವಿನಹೊಲ, ಮರಡಿ, ತೋಟದಮನೆ, ಕವನಹಳ್ಳ, ಬದ್ರೆಖಾನ್, ಹೊಸನೆಲ, ಮುಂಡುಗದ ಮನೆ ಗಿರಿಜನ ಗ್ರಾಮಸ್ಥರು, ಗೀತೋಟ ಹರಿಜನ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.
ಹೊರನಾಡಿನಿಂದ ಕವನಹಳ್ಳಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚರಿಸಲು ತೊಂದರೆ ಆಗಿದೆ. ಈ ಹಿಂದೆ ಅನುದಾನ ಮಂಜೂರು ಆಗಿದ್ದು ಈ ವರೆಗೂ ಕಾಮಗಾರಿ ನಡೆದಿಲ್ಲ.
ಕಳಸ-ಹೊರನಾಡು ಮುಖ್ಯ ರಸ್ತೆಯಿಂದ ಮುಂಡುಗದಮನೆ, ಕುಂಬಾರಹಡ್ಲು ಪ್ರದೇಶದಲ್ಲಿ ಗಿರಿನರೇ ಹೆಚ್ಚಿರುವುದು. ಇಲ್ಲಿ ಈ ಗ್ರಾಮಕ್ಕೆ ಹೋಗಬೇಕಾದರೆ ಸಣ್ಣ ನದಿಯನ್ನು ದಾಟಿ ಹೋಗಬೇಕು. ಈ ನದಿಗೆ ಸೇತುವೆಯನ್ನು ನಿರ್ಮಿಸಿಕೊಡಿ ಎಂದು ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿದ್ದರೂ ಸೇತುವೆ ನಿರ್ಮಾಣ ಮಾಡಿಲ್ಲ.
ಹೊರನಾಡಿನಿಂದ ಗೀತೋಟ ಹರಿಜನ ಕಾಲೋನಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಹರಿಯುವ ಸಣ್ಣ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಕೇಳಿಕೊಂಡರೂ ಕೂಡ ಬೇಡಿಕೆ ಈಡೇರಲಿಲ್ಲ.
ಈ ಬೇಡಿಕೆಗೋಸ್ಕರ ಈ ಬಾರಿಯ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.










